Monday, November 10, 2025

ಜೀವನದಿ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಬ್ರಹ್ಮಕುಂಡಿಕೆಯಿಂದ ಉಕ್ಕಲಿರುವ ಪವಿತ್ರ ತೀರ್ಥ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಡಗಿನ ಜನರ ಕುಲದೇವತೆ ಮತ್ತು ಕರ್ನಾಟಕದ ಜೀವನದಿಯಾದ ಪವಿತ್ರ ಕಾವೇರಿ ಮಾತೆಯ ವಾರ್ಷಿಕ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ಶುಕ್ರವಾರ, ಅಕ್ಟೋಬರ್ 17 ರಂದು ಮಧ್ಯಾಹ್ನ 1:44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ, ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

ವರ್ಷಕ್ಕೊಮ್ಮೆ ಘಟಿಸುವ ಈ ಪವಾಡಸದೃಶ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಕಾತರದಿಂದ ಆಗಮಿಸುತ್ತಿದ್ದು, ಸ್ಥಳದಲ್ಲಿ ಭಕ್ತ ಸಾಗರವೇ ನೆರೆಯುವ ನಿರೀಕ್ಷೆಯಿದೆ. ಈ ಶುಭ ಸಂದರ್ಭದೊಂದಿಗೆ ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಅಧಿಕೃತ ಚಾಲನೆ ದೊರೆಯಲಿದೆ.

ಸಕಲ ಸಿದ್ಧತೆ ಮತ್ತು ಧಾರ್ಮಿಕ ಕೈಂಕರ್ಯಗಳು
ಜಿಲ್ಲಾಡಳಿತವು ಜಾತ್ರೆಗಾಗಿ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿ ಬರುವುದನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ. ತೀರ್ಥೋದ್ಭವಕ್ಕೂ ಮೊದಲು ಕ್ಷೇತ್ರದ ಅರ್ಚಕ ವೃಂದದಿಂದ ಧಾರ್ಮಿಕ ಪೂಜೆಗಳು ಮತ್ತು ನಾನಾ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ 11:30ರಿಂದಲೇ ತೀರ್ಥೋದ್ಭವದ ತನಕ ಮಂತ್ರ ಪಠಣೆ ನಿರಂತರವಾಗಿ ಜರುಗಲಿದೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮುಜರಾಯಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ, ಶಾಸಕ ಎ.ಎಸ್ ಪೊನ್ನಣ್ಣ, ಮಂಥರ್ ಗೌಡ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಭದ್ರತೆ ಮತ್ತು ವ್ಯವಸ್ಥೆ
ಭಕ್ತರ ಅನುಕೂಲಕ್ಕಾಗಿ ಸ್ಥಳದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ತಾತ್ಕಾಲಿಕ ಶೌಚಾಲಯ ನಿರ್ಮಾಣ, ಅನ್ನದಾನಕ್ಕೆ ವ್ಯವಸ್ಥೆ ಮತ್ತು ಸುಗಮ ಸಂಚಾರಕ್ಕೆ ವಿಶೇಷ ಗಮನ ನೀಡಲಾಗಿದೆ. ಯಾವುದೇ ರೀತಿಯ ನೂಕು ನುಗ್ಗಲು ಉಂಟಾಗದಂತೆ ತಡೆಯಲು, ಏಕಮುಖ ಸಂಚಾರಕ್ಕೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಭದ್ರತೆಗಾಗಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ.

ಕಾವೇರಿ ಮಾತೆಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಲಗ್ಗೆ ಇಡುತ್ತಿದ್ದು, ಕೊಡಗು ಜಿಲ್ಲೆಯ ಜನರು ತಮ್ಮ ಕುಲದೇವತೆಯ ಸ್ವಾಗತಕ್ಕೆ ಸಂಪೂರ್ಣವಾಗಿ ಸಜ್ಜಾಗಿದ್ದಾರೆ.

error: Content is protected !!