ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಟಿ20 ವಿಶ್ವಕಪ್ ಮಹಾಸಮರಕ್ಕೆ ಈಗ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 7 ರಿಂದ ಅಧಿಕೃತವಾಗಿ ಚುಟುಕು ಕ್ರಿಕೆಟ್ ಹಬ್ಬ ಆರಂಭವಾಗಲಿದ್ದು, ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ (USA) ತಂಡವನ್ನು ಎದುರಿಸಲಿದೆ.
ವಿಶ್ವಕಪ್‌ನ ಕಠಿಣ ಸವಾಲುಗಳನ್ನು ಎದುರಿಸುವ ಮುನ್ನ ಟೀಮ್ ಇಂಡಿಯಾ ತನ್ನ ಬಲ ಪ್ರದರ್ಶಿಸಲು ಒಂದು ಅಭ್ಯಾಸ ಪಂದ್ಯವನ್ನು ಆಡಲಿದೆ. ಫೆಬ್ರವರಿ 4 ರಂದು ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಕಣಕ್ಕಿಳಿಯಲಿದ್ದು, ಇದು ತಂಡದ ಸಿದ್ಧತೆಯನ್ನು ಅಳೆಯಲು ಉತ್ತಮ ವೇದಿಕೆಯಾಗಲಿದೆ.
ಭಾರತ ತಂಡದ ಲೀಗ್ ಪಂದ್ಯಗಳ ವೇಳಾಪಟ್ಟಿ:
ಫೆಬ್ರವರಿ 7 ಭಾರತ vs ಯುಎಸ್ಎ
ಫೆಬ್ರವರಿ 12 ಭಾರತ vs ನಮೀಬಿಯಾ
ಫೆಬ್ರವರಿ 15 ಭಾರತ vs ಪಾಕಿಸ್ತಾನ್
ಫೆಬ್ರವರಿ 18 ಭಾರತ vs ನೆದರ್ಲೆಂಡ್ಸ್
ವಿಶ್ವಕಪ್‌ನಲ್ಲೇ ಅತಿ ಹೆಚ್ಚು ನಿರೀಕ್ಷೆ ಮೂಡಿಸಿರುವುದು ಅಪ್ರತಿಮ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ. ಫೆಬ್ರವರಿ 15 ರಂದು ಕೊಲಂಬೊದ ಮೈದಾನದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಇಡೀ ವಿಶ್ವದ ಕಣ್ಣು ಈ ಪಂದ್ಯದ ಮೇಲಿರಲಿದೆ. ಲೀಗ್ ಹಂತದ ಕೊನೆಯ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆಯಲಿದೆ.
ಲೀಗ್ ಹಂತದ ನಾಲ್ಕು ಗ್ರೂಪ್‌ಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಲಿವೆ. ಸೂಪರ್-8 ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಟಾಪ್-4 ಸ್ಥಾನ ಗಳಿಸುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿವೆ.
ಸದ್ಯದ ಸಿದ್ಧತೆಗಳನ್ನು ಗಮನಿಸಿದರೆ, ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವದರ್ಜೆಯ ಪ್ರದರ್ಶನ ನೀಡಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯುತ್ತಿದೆ.



