Thursday, November 13, 2025

ಡೀಪ್‌ಫೇಕ್ ದಂಧೆಗೆ ಕಡಿವಾಣ: AI-ಸೃಷ್ಟಿ ಕಂಟೆಂಟ್‌ಗೆ ‘ವಾಟರ್‌ಮಾರ್ಕ್’ ಕಡ್ಡಾಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಂತ್ರಜ್ಞಾನದ ಮುಂದುವರಿದ ಭಾಗವಾದ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸೃಷ್ಟಿಸಲಾಗುವ ಡೀಪ್‌ಫೇಕ್ ವೀಡಿಯೊಗಳ ಹಾವಳಿಯು ದೇಶದಲ್ಲಿ ವಿಪರೀತವಾಗಿ ಹೆಚ್ಚಿದ್ದು, ಜನಸಾಮಾನ್ಯರು ವಂಚನೆಗೆ ಒಳಗಾಗುತ್ತಿರುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ರಶ್ಮಿಕಾ ಮಂದಣ್ಣ ಅವರ ನಕಲಿ ಬಾತ್‌ರೂಮ್ ವಿಡಿಯೋ, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತಿರುಚಿದ ತುಣುಕುಗಳು ಮತ್ತು ಇತ್ತೀಚೆಗೆ ನಿರ್ಮಲಾ ಸೀತಾರಾಮನ್ ಅವರ ಡೀಪ್‌ಫೇಕ್ ಸಂದೇಶದ ಮೂಲಕ ಬೆಂಗಳೂರಿನ ಮಹಿಳೆಯೊಬ್ಬಳು ಬರೋಬ್ಬರಿ 43 ಲಕ್ಷ ರೂ.ಗಳನ್ನು ಕಳೆದುಕೊಂಡ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಸರ್ಕಾರ ಈ ಸಮಸ್ಯೆಗೆ ಕಡಿವಾಣ ಹಾಕಲು ಕಠಿಣ ಕಾಯ್ದೆ ರೂಪಿಸಲು ಮುಂದಾಗಿದೆ.

ಈ ನಿಟ್ಟಿನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ AI ಸೃಷ್ಟಿತ ವಿಷಯಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ರಚಿಸಿದೆ. ಇದು 2021ರ ಮಾಹಿತಿ ತಂತ್ರಜ್ಞಾನ ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ ನಿಯಮಗಳಿಗೆ ತಿದ್ದುಪಡಿ ತರಲು ಪ್ರಸ್ತಾಪಿಸಿದೆ. ಈ ಕರಡು ನಿಯಮಗಳ ಬಗ್ಗೆ ಸಾರ್ವಜನಿಕ ಸಲಹೆ ಮತ್ತು ಟಿಪ್ಪಣಿಗಳನ್ನು ಸರ್ಕಾರವು ಆಹ್ವಾನಿಸಿದೆ.

AI ಕಂಟೆಂಟ್‌ಗೆ ಸ್ಪಷ್ಟ ಲೇಬಲಿಂಗ್ ಕಡ್ಡಾಯ: ಡ್ರಾಫ್ಟ್ ನಿಯಮಗಳ ಪ್ರಮುಖಾಂಶಗಳು ಈ ಕೆಳಗಿನಂತಿವೆ:

ಬಳಕೆದಾರರಿಂದ ಘೋಷಣೆ ಕಡ್ಡಾಯ: ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ತಮ್ಮಲ್ಲಿ ಕಂಟೆಂಟ್ ಅಪ್‌ಲೋಡ್ ಮಾಡುವ ಬಳಕೆದಾರರಿಂದ ಡಿಕ್ಲರೇಶನ್ ಪಡೆಯಬೇಕು. ಅಂದರೆ, ಅಪ್‌ಲೋಡ್ ಮಾಡುವ ವಿಷಯವು ಕೃತಕವಾಗಿ ಸೃಷ್ಟಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಬಳಕೆದಾರರೇ ದೃಢೀಕರಿಸಬೇಕು.

ಲೇಬಲಿಂಗ್ ಮತ್ತು ವಾಟರ್‌ಮಾರ್ಕ್‌: AI ಸೃಷ್ಟಿತ ಕಂಟೆಂಟ್ ಆಗಿದ್ದರೆ, ಅದು ನೋಡುಗರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಲೇಬಲ್ ಮಾಡಿರಬೇಕು ಮತ್ತು ವಾಟರ್‌ಮಾರ್ಕ್‌ಗಳನ್ನು ಅಳವಡಿಸಿರಬೇಕು.

ವೀಡಿಯೊ/ದೃಶ್ಯ ಕಂಟೆಂಟ್‌: ಪರದೆಯ ಶೇ. 10ರಷ್ಟು ಜಾಗವನ್ನು ಆಕ್ರಮಿಸುವ ರೀತಿಯಲ್ಲಿ ಲೇಬಲ್ ಗೋಚರಿಸಬೇಕು.

ಆಡಿಯೋ ಕಂಟೆಂಟ್‌: ಒಟ್ಟಾರೆ ಅವಧಿಯ ಮೊದಲ ಶೇ. 10ರಷ್ಟು ಅವಧಿಯಲ್ಲಿ ಲೇಬಲ್ ಪ್ರದರ್ಶನವಾಗಬೇಕು.

ಈ ನಿಯಮಗಳು ಜಾರಿಗೆ ಬಂದರೆ, ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಪ್ರತಿಯೊಂದು AI ಜನರೇಟೆಡ್ ಇಮೇಜ್ ಮತ್ತು ವೀಡಿಯೊಗಳಲ್ಲಿ, ಅದು ಕೃತಕವಾಗಿ ಸೃಷ್ಟಿಸಲಾದ ವಿಷಯ ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗುತ್ತದೆ. ಇದರಿಂದ ಜನರು ಮೋಸ ಹೋಗುವ ಸಾಧ್ಯತೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಪತ್ತೆ ಹಚ್ಚುವ ಹೊಣೆ ಪ್ಲಾಟ್‌ಫಾರ್ಮ್‌ಗಳ ಮೇಲೆ

ಕೇವಲ ಬಳಕೆದಾರರ ಘೋಷಣೆಯ ಮೇಲೆ ಅವಲಂಬಿತವಾಗದೇ, ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೂ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಜನರು AI ಸೃಷ್ಟಿತ ಕಂಟೆಂಟ್ ಎಂಬುದನ್ನು ಮುಚ್ಚಿಟ್ಟು ಅಪ್‌ಲೋಡ್ ಮಾಡಿದರೂ, ಈ ಪ್ಲಾಟ್‌ಫಾರ್ಮ್‌ಗಳು ತಮ್ಮಲ್ಲಿರುವ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ, ಅಪ್‌ಲೋಡ್ ಆಗುವ ವಿಷಯವು AI ಜನರೇಟ್ ಆಗಿರುವಂಥದ್ದೇ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಕರಡು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

error: Content is protected !!