Friday, November 7, 2025

ಭಾರತ–ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾದ್ದು ನನ್ನಿಂದ: ಟ್ರಂಪ್‌ ಕ್ರೆಡಿಟ್‌ ರೋಗಕ್ಕೆ ಮದ್ದೇ ಇಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ಶಾಂತಿ ಒಪ್ಪಂದದ ಕ್ರೆಡಿಟ್‌ ಮತ್ತೆ ತನ್ನದಾಗಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಈ ಬಾರಿ ಯುದ್ಧದಲ್ಲಿ ನಷ್ಟವಾದ ಜೆಟ್‌ ವಿಮಾನಗಳ ಸಂಖ್ಯೆಯನ್ನು ಎಂಟಕ್ಕೇರಿಸಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.

ಮಿಯಾಮಿಯಲ್ಲಿ ನಡೆದ ಅಮೆರಿಕ ವ್ಯಾಪಾರ ವೇದಿಕೆಯಲ್ಲಿ ಮಾತನಾಡಿದ ಟ್ರಂಪ್‌, “ಭಾರತ–ಪಾಕಿಸ್ತಾನ ಮಧ್ಯದ ಯುದ್ಧವನ್ನು ತಡೆಯಲು ನಾವು ವ್ಯಾಪಾರ ಬೆದರಿಕೆ ಹಾಕಿದ್ದೇವೆ. ಅಮೆರಿಕ ಮಧ್ಯಸ್ಥಿಕೆವಹಿಸದಿದ್ದರೆ, ಪರಿಸ್ಥಿತಿ ಭೀಕರವಾಗುತ್ತಿತ್ತು. ಎಂಟು ಯುದ್ಧ ವಿಮಾನಗಳನ್ನು ಕಳೆದುಕೊಂಡು, ದೊಡ್ಡ ನಷ್ಟ ತಪ್ಪಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

ಅವರು ಮುಂದುವರೆದು, “ಅಂದಿನ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ಇಬ್ಬರೂ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿದ್ದರು. ಆದರೆ ಸಂಘರ್ಷ ಹೆಚ್ಚಾಗುತ್ತಿದ್ದಂತೆ, ನಾವು ಎರಡೂ ರಾಷ್ಟ್ರಗಳಿಗೆ ಸುಂಕ ಬೆದರಿಕೆ ಹಾಕಿದ್ದೇವೆ. ಅಮೆರಿಕ ಮಧ್ಯಸ್ಥಿಕೆಯ ಫಲವಾಗಿ ಕದನ ವಿರಾಮ ಸಾಧ್ಯವಾಯಿತು ಮತ್ತು ಪರಮಾಣು ಯುದ್ಧದ ಸಂಭವವನ್ನು ತಪ್ಪಿಸಲಾಗಿದೆ” ಎಂದು ಹೇಳಿದ್ದಾರೆ.

ಟ್ರಂಪ್‌ ಅವರು ಹಿಂದೆಯೂ “ಭಾರತಕ್ಕೆ ಶೇ.250ರಷ್ಟು ಸುಂಕ ಬೆದರಿಕೆ ಹಾಕಿದ್ದರಿಂದ ಪಾಕಿಸ್ತಾನ ಜೊತೆ ಕದನ ವಿರಾಮ ಸಾಧ್ಯವಾಯಿತು” ಎಂದು ಹೇಳಿದ್ದರು. ಆದರೆ ಭಾರತ ಈ ಹೇಳಿಕೆಯನ್ನು ಸಂಪೂರ್ಣ ತಿರಸ್ಕರಿಸಿ, “ಕದನ ವಿರಾಮ ಒಪ್ಪಂದ ದ್ವಿಪಕ್ಷೀಯ ನಿರ್ಧಾರವಾಗಿತ್ತು, ಯಾವುದೇ ಬಾಹ್ಯ ಒತ್ತಡ ಇರಲಿಲ್ಲ” ಎಂದು ಸ್ಪಷ್ಟಪಡಿಸಿತ್ತು.

ಆದರೂ ಟ್ರಂಪ್‌ ತಮ್ಮ ಹೇಳಿಕೆಯಿಂದ ಹಿಂದೆ ಸರಿಯದೇ, ಶಾಂತಿ ಒಪ್ಪಂದದ ಕ್ರೆಡಿಟ್‌ ಅನ್ನು ತನ್ನ ಸುಂಕ ನೀತಿಯೊಂದಿಗೆ ಜೋಡಿಸಲು ಮುಂದಾಗಿದ್ದಾರೆ. ವರದಿಯ ಪ್ರಕಾರ, ಅವರು ಈಗಾಗಲೇ 60ಕ್ಕೂ ಹೆಚ್ಚು ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಪ್ರತಿಸಾರಿ ಯುದ್ಧ ವಿಮಾನ ನಷ್ಟದ ಸಂಖ್ಯೆಯನ್ನು ಬದಲಾಯಿಸುತ್ತಲೇ ಬಂದಿದ್ದಾರೆ ಎನ್ನಲಾಗಿದೆ.

error: Content is protected !!