January17, 2026
Saturday, January 17, 2026
spot_img

128 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್! ಪಾಕಿಸ್ತಾನಕ್ಕೆ ಭಾರಿ ನಿರಾಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 128 ವರ್ಷಗಳ ಬಳಿಕ ಕ್ರಿಕೆಟ್ ಮತ್ತೆ ಒಲಿಂಪಿಕ್ಸ್ ವೇದಿಕೆಗೆ ಕಾಲಿಡಲಿದೆ. ಲಾಸ್ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕ್ರೀಡೆಯೂ ಅಧಿಕೃತವಾಗಿ ಸೇರಿದೆ. ಈ ಮಹತ್ವದ ಕ್ಷಣಕ್ಕೆ ಸಜ್ಜಾಗಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೀಗ ತಂಡಗಳ ಆಯ್ಕೆ ವಿಧಾನವನ್ನು ಅಂತಿಮಗೊಳಿಸಿದೆ.

ನವೆಂಬರ್ 7ರಂದು ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ, ಒಲಿಂಪಿಕ್ಸ್‌ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ ಆರು ತಂಡಗಳು ಭಾಗವಹಿಸಲಿವೆ ಎಂದು ನಿರ್ಧರಿಸಲಾಯಿತು. ಅಂದರೆ ಒಟ್ಟು 12 ಕ್ರಿಕೆಟ್ ತಂಡಗಳು ಕಣಕ್ಕಿಳಿಯಲಿವೆ. ಆದರೆ ಈ ಬಾರಿ ಆಯ್ಕೆಯ ವಿಧಾನ ವಿಭಿನ್ನವಾಗಿದೆ — ಏಕೆಂದರೆ ಪ್ರಾದೇಶಿಕ ಅರ್ಹತಾ ವ್ಯವಸ್ಥೆ ಅನ್ವಯವಾಗಲಿದೆ.

ಐಸಿಸಿಯ ಪ್ರಕಾರ, ತಂಡಗಳ ಆಯ್ಕೆ ಟಿ20 ಶ್ರೇಯಾಂಕದ ಆಧಾರದ ಮೇಲೆ ನಡೆಯುತ್ತದೆ. ಆದರೆ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಏಷ್ಯಾ, ಓಷಿಯಾನಿಯಾ, ಯುರೋಪ್ ಮತ್ತು ಆಫ್ರಿಕಾ ಖಂಡಗಳ ಪ್ರತಿ ಪ್ರದೇಶದಿಂದ ಅಗ್ರ ಶ್ರೇಯಾಂಕಿತ ತಂಡಗಳಿಗೆ ಅವಕಾಶ ನೀಡಲಾಗುತ್ತದೆ.

ಏಷ್ಯಾದಿಂದ ಭಾರತ ಅಗ್ರಸ್ಥಾನದಲ್ಲಿ:

ಪ್ರಸ್ತುತ ಟಿ20 ಶ್ರೇಯಾಂಕದ ಪ್ರಕಾರ, ಏಷ್ಯಾದಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಓಷಿಯಾನಿಯಾದಲ್ಲಿ ಆಸ್ಟ್ರೇಲಿಯಾ, ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಯುರೋಪ್‌ನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿವೆ. ಈ ನಾಲ್ಕು ತಂಡಗಳು ನೇರವಾಗಿ ಅರ್ಹತೆ ಪಡೆಯುವ ಸಾಧ್ಯತೆ ಇದೆ.

ಆತಿಥೇಯ ರಾಷ್ಟ್ರ ಅಮೆರಿಕ ತಂಡಕ್ಕೂ ನೇರ ಪ್ರವೇಶ ಸಿಗಲಿದೆ. ಉಳಿದ ಒಂದು ಸ್ಥಾನವನ್ನು “ಜಾಗತಿಕ ಅರ್ಹತಾ ಸುತ್ತು” ಮೂಲಕ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಆದರೆ ಆ ಆಯ್ಕೆ ಸುತ್ತಿನ ವಿಧಾನ ಇನ್ನೂ ಬಹಿರಂಗಗೊಂಡಿಲ್ಲ. ಒಂದು ವೇಳೆ ಅದು ಟಿ20 ಶ್ರೇಯಾಂಕದ ಆಧಾರದ ಮೇಲೆ ನಡೆಯುವಂತಾದರೆ, ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ ತಂಡಕ್ಕೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.

ಈ ಬಾರಿ ಪ್ರಾದೇಶಿಕ ಅರ್ಹತಾ ನಿಯಮದಿಂದ ಪಾಕಿಸ್ತಾನಕ್ಕೆ ಭಾರಿ ನಿರಾಸೆ ಎದುರಾಗಲಿದೆ. ಏಕೆಂದರೆ ಪಾಕಿಸ್ತಾನ ಟಿ20 ಶ್ರೇಯಾಂಕದಲ್ಲಿ ಈಗ 7ನೇ ಸ್ಥಾನದಲ್ಲಿದೆ. ಹೀಗಾಗಿ ಚೊಚ್ಚಲ ಒಲಿಂಪಿಕ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ಕಡಿಮೆ.

ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರಿಸುವ ನಿರ್ಧಾರದಿಂದ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳಿಗೆ ಹೊಸ ನಿರೀಕ್ಷೆ ಹುಟ್ಟಿದೆ. ಈಗ ಎಲ್ಲರ ಕಣ್ಣುಗಳು ಐಸಿಸಿಯ ಅಂತಿಮ ತಂಡಗಳ ಘೋಷಣೆ ಹಾಗೂ ಅರ್ಹತಾ ಸುತ್ತಿನ ನಿಯಮಗಳತ್ತ ನೆಟ್ಟಿವೆ.

Must Read

error: Content is protected !!