ಹೊಸದಿಗಂತ ಬೆಂಗಳೂರು
ಲೆಜೆಂಡ್ಸ್ ಪ್ರೊ T20 ಲೀಗ್ ತನ್ನ ಚೊಚ್ಚಲ ಆವೃತ್ತಿಯೊಂದಿಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ರೋಮಾಂಚನ ಮೂಡಿಸಿದೆ. ಕ್ರಿಸ್ ಗೇಲ್, ಜಾಕ್ವೆಸ್ ಕಾಲಿಸ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಮತ್ತು ಸ್ಟುವರ್ಟ್ ಬಿನ್ನಿಯಂತಹ ವಿಶ್ವ ಕ್ರಿಕೆಟ್‌ನ ಘಟಾನುಘಟಿಗಳು ಈ ಲೀಗ್ ಮೂಲಕ ಒಂದೇ ವೇದಿಕೆಯಲ್ಲಿ ಪುನರ್ಮಿಲನಗೊಳ್ಳುತ್ತಿದ್ದಾರೆ.
ವರ್ಷಗಳ ಕಾಲ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡು, ಪರಸ್ಪರ ಪೈಪೋಟಿ ನಡೆಸಿ, ಅನೇಕ ಮರೆಯಲಾಗದ ನೆನಪುಗಳನ್ನು ನಿರ್ಮಿಸಿದ್ದ ಈ ತಾರೆಯರು ಮತ್ತೊಮ್ಮೆ ಜೊತೆಯಾಗಿ ಆಡಲು ಸಜ್ಜಾಗಿದ್ದಾರೆ. ಈ ಕುರಿತು ಆಟಗಾರರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ತಮ್ಮ ಹಳೆಯ ಕ್ರಿಕೆಟ್ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. “ನನ್ನ ಅತ್ಯುತ್ತಮ ಕ್ರಿಕೆಟ್ ದಿನಗಳು ಮತ್ತೆ ಕಣ್ಣ ಮುಂದೆ ಬರುತ್ತಿವೆ. ಕಾಲಿಸ್ ಅವರಂಥ ದಿಗ್ಗಜರ ವಿರುದ್ಧ ಆಡಿದಾಗ ಅವರನ್ನು ಮೀರಿಸುವುದು ಒಂದು ಸವಾಲಾಗಿತ್ತು. ಉತ್ತಪ್ಪ ಅವರೊಂದಿಗೆ ಬ್ಯಾಟಿಂಗ್ ತಂತ್ರಗಳ ಬಗ್ಗೆ ಅನೇಕ ಸಲ ಮಾತುಕತೆ ನಡೆಸಿದ್ದೇನೆ, ರಾಯುಡು ಜೊತೆ ಅನೇಕ ತಮಾಷೆಯ ಕ್ಷಣಗಳನ್ನು ಕಳೆದಿದ್ದೇನೆ. ಈಗ ಈ ಲೀಗ್ ಮೂಲಕ ಧವನ್, ವಾಟ್ಸನ್ ಜೊತೆ ಮತ್ತೆ ಆಡಲು ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ,” ಎಂದು ಹೇಳಿದ್ದಾರೆ.
ಕ್ರಿಕೆಟ್‌ನಿಂದ ದೂರವಾದ ನಂತರ ಬ್ಯಾಟ್ ಕೈಯಲ್ಲಿ ಹಿಡಿಯುವ ಅನುಭವವನ್ನು ಬಹಳಷ್ಟು ಮಿಸ್ ಮಾಡಿಕೊಂಡಿದ್ದೆ ಎಂದು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ ಹೇಳಿದ್ದಾರೆ. “ಈಗ ಈ ಲೀಗ್ ಮೂಲಕ ಪುನಃ ಬ್ಯಾಟ್ ಬೀಸುವುದು, ಚೆಂಡನ್ನು ಹೊಡೆಯುವುದು, ಟೈಮಿಂಗ್ ಹುಡುಕುವುದು ಮತ್ತೆ ಆಟಗಾರನಂತೆ ಭಾಸವಾಗುವಂತೆ ಮಾಡಿದೆ. ಇವೆಲ್ಲವೂ ಮರಳಿ ಬಂದಿರುವುದಕ್ಕೆ ಬಹಳ ಸಂತಸವಾಗಿದೆ,” ಎಂದಿದ್ದಾರೆ.
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಅವರು ಹಳೆಯ ಸ್ನೇಹ ಸಂಬಂಧಗಳನ್ನು ಮೆಲುಕು ಹಾಕಿದರು. “ನಾನು ರಾಯುಡು ಅವರನ್ನು ಎದುರಾಳಿಯಾಗಿ ಕಂಡಿದ್ದೇನೆ, ನಂತರ ಅವರ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೇನೆ. ವಿಶೇಷವಾಗಿ ದಿನೇಶ್ ಕಾರ್ತಿಕ್ ಜೊತೆ ಪಂದ್ಯ ಮುಗಿಸುವ ತಂತ್ರಗಳ ಬಗ್ಗೆ ಅನೇಕ ಬಾರಿ ಚರ್ಚೆ ನಡೆಸಿದ್ದೇವೆ. ಅಂಡರ್-19 ದಿನಗಳಿಂದ ಇರುವ ನಮ್ಮ ಸ್ನೇಹವೂ ಬಹಳ ವಿಶೇಷ,” ಎಂದು ಅವರು ಹೇಳಿದರು.
ಅಂಬಟಿ ರಾಯುಡು ಅವರು ಗೆದ್ದ ಟ್ರೋಫಿಗಳನ್ನು ನೆನಪಿಸಿಕೊಂಡರು. “ಒಟ್ಟಿಗೆ ಆಡಿದ್ದ, ಟ್ರೋಫಿ ಗೆದ್ದಿದ್ದ ಆಟಗಾರರನ್ನು ಮತ್ತೆ ನೋಡಿದಾಗ ಹಳೆಯ ದಿನಗಳು ಕಣ್ಮುಂದೆ ಬರುತ್ತವೆ. ಬಿನ್ನಿ ಅವರ ಜೊತೆಗಿನ ಆಟ, ಗೇಲ್ ವಿರುದ್ಧದ ಮರೆಯಲಾಗದ ಪಂದ್ಯಗಳು, ವಾಟ್ಸನ್ ಜೊತೆಗಿನ ವಿಶೇಷ ಕ್ಷಣಗಳು ನೆನಪಾಗುತ್ತಿವೆ. ಈ ಲೀಗ್ ಇವೆಲ್ಲವನ್ನೂ ಮತ್ತೆ ಒದಗಿಸಿರುವುದು ಸಂತೋಷ ತಂದಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವೇಗದ ಬೌಲಿಂಗ್ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಈ ತಂಡದ ಬಗ್ಗೆ ರೋಮಾಂಚನ ವ್ಯಕ್ತಪಡಿಸಿದರು. “ನನಗೆ ಕ್ರಿಕೆಟ್ ಮಾತ್ರವಲ್ಲ, ಈ ತಂಡದ ಪುನರ್ಮಿಲನವೂ ತುಂಬಾ ರೋಮಾಂಚನಕಾರಿಯಾಗಿದೆ. ನಾವು ಪ್ರಪಂಚದಾದ್ಯಂತ ಆಡಿದ್ದೇವೆ, ಸ್ಕೋರ್‌ಕಾರ್ಡ್ ಮೀರಿದ ಅನೇಕ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದೇವೆ. ಅವನ್ನೆಲ್ಲ ಮತ್ತೆ ಅನುಭವಿಸುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತೋಷ ತಂದಿದೆ,” ಎಂದರು.
ಈ ದಿಗ್ಗಜ ಆಟಗಾರರ ಪುನರಾಗಮನವು ಪ್ರೇಕ್ಷಕರಲ್ಲಿ ಹಳೆಯ ಕ್ರಿಕೆಟ್ ವೈಭವವನ್ನು ಮತ್ತೆ ನೋಡುವ ಉತ್ಸಾಹವನ್ನು ಹೆಚ್ಚಿಸಿದೆ.

