ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಟೂರ್ನಿಯು ಇಂದಿನಿಂದ ಆರಂಭವಾಗುತ್ತಿದೆ. ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗುತ್ತಿದ್ದು, ಭಾರತ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆ ಬಳಿಕ ಪಂದ್ಯಾವಳಿಯ ಬಹುನಿರೀಕ್ಷಿತ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಸೆಪ್ಟೆಂಬರ್ 14 ರಂದು ನಡೆಯಲಿದೆ.
ಆದರೆ ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಎಲ್ಲಾ ತಂಡಗಳ ನಾಯಕರೊಂದಿಗೆ ಇಂದು ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಇದರಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಕೂಡ ಭಾಗವಹಿಸಿದ್ದರು. ಇದೀಗ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮೊದಲೇ ವೇದಿಕೆ ಮೇಲೆ ಪಾಕ್ ನಾಯಕನಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಈ ಸಂದರ್ಭ ಪಾಕಿಸ್ತಾನ ಎದುರಿನ ಪಂದ್ಯದ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದರು. ಸೂರ್ಯಕುಮಾರ್ ಯಾದವ್ ಅವರನ್ನು ಉದ್ದೇಶಿಸಿ ಮಾಧ್ಯಮದವರು, ಭಾರತ-ಪಾಕಿಸ್ತಾನ ನಡುವೆ ಟೆನ್ಷನ್ ಇರುವುದರ ನಡುವೆ ಆಟಗಾರರು ತಮ್ಮ ಸಿಟ್ಟನ್ನು ನಿಯಂತ್ರಿಸಲು ನೀವೇನಾದರೂ ನಿರ್ದೇಶನ ನೀಡಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸೂರ್ಯ, ‘ಮೈದಾನಕ್ಕಿಳಿದಾಗ ನಮ್ಮಲ್ಲಿ ಆಕ್ರಮಣಕಾರಿ ಮನೋಭಾವ ಯಾವಾಗಲೂ ಇದ್ದೇ ಇರುತ್ತದೆ. ಆಕ್ರಮಣಕಾರಿ ಮನೋಭಾವ ಇಲ್ಲದೇ ಕ್ರಿಕೆಟ್ ಆಡಲು ಸಾಧ್ಯವೇ ಇಲ್ಲ. ನಾವು ಮುಂದಿನ ಮ್ಯಾಚ್ ಆಡಲು ಉತ್ಸುಕನಾಗಿದ್ದೇನೆ’ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಎದುರು ನಮ್ಮ ತಂಡ ಆಕ್ರಮಣಕಾರಿ ಆಟವನ್ನು ಆಡಲಿದೆ ಎನ್ನುವ ಓಪನ್ ವಾರ್ನಿಂಗ್ ಕೊಟ್ಟಿದ್ದಾರೆ ಸೂರ್ಯಕುಮಾರ್ ಯಾದವ್.
ಇದರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಯಾವುದೇ ಮಾತುಕತೆಯನ್ನಾಡಿಲ್ಲ, ಹಾಗೆಯೇ ಕೈ ಕೂಡ ಕುಲುಕದೆ ಅಂತರ ಕಾಯ್ದುಕೊಂಡಿದ್ದಾರೆ.
ವಾಸ್ತವವಾಗಿ ಕೆಲವು ದಿನಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನ ತಂಡದ ಆಟಗಾರರು ಒಂದೇ ಮೈದಾನದಲ್ಲಿ ಅಭ್ಯಾಸ ನಡೆಸಿದರೂ ಒಬ್ಬರಿಗೊಬ್ಬರು ಮಾತನಾಡುವುದಾಗಲಿ ಅಥವಾ ಕಡೆ ಪಕ್ಷ ಕೈಕುಲುಕುವುದಾಗಲಿ ಮಾಡಿಲಿಲ್ಲ ಎಂದು ವರದಿಯಾಗಿತ್ತು. ಇದೀಗ ಅದಕ್ಕೆ ಪೂರಕವೆಂಬಂತೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲೂ ಉಭಯ ತಂಡಗಳ ನಾಯಕರು ಅಂತರವನ್ನು ಕಾಯ್ದುಕೊಂಡಿದ್ದಾರೆ.