ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಮೈದಾನದಲ್ಲಿ ತನ್ನ ಅದ್ಭುತ ಬ್ಯಾಟಿಂಗ್ ಕೌಶಲ್ಯದಿಂದ ಎಲ್ಲರ ಗಮನ ಸೆಳೆದಿರುವ 14 ವರ್ಷದ ಪ್ರತಿಭಾವಂತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇದೀಗ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಹಾರ ರಾಜ್ಯ ಚುನಾವಣಾ ಆಯೋಗವು ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ವೈಭವ್ ಸೂರ್ಯವಂಶಿಯನ್ನು “ಭವಿಷ್ಯದ ಮತದಾರರ ಐಕಾನ್” ಆಗಿ ನೇಮಕ ಮಾಡಿದೆ.
ಯುವ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶ:
ಮುಂದಿನ ಬಿಹಾರ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ನವೆಂಬರ್ 6ರಂದು ಹಾಗೂ ಎರಡನೇ ಹಂತ ನವೆಂಬರ್ 11ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯುವಜನತೆಗೆ ಮತದಾನದ ಮಹತ್ವವನ್ನು ತಿಳಿಸಲು ಚುನಾವಣಾ ಆಯೋಗವು ವೈಭವ್‌ರನ್ನು ಆಯ್ಕೆ ಮಾಡಿದೆ. ಕೇವಲ ಕ್ರೀಡಾಂಗಣದಲ್ಲಷ್ಟೇ ಅಲ್ಲ, ಈಗ ಸಮಾಜದ ಜಾಗೃತಿಯ ವೇದಿಕೆಯಲ್ಲಿಯೂ ವೈಭವ್ ಸೂರ್ಯವಂಶಿ ತಮ್ಮ ಪಾತ್ರ ನಿರ್ವಹಿಸಲಿದ್ದಾರೆ.
ಚುನಾವಣಾ ಆಯೋಗ ಮತ್ತು ಪಿಐಬಿ ಬಿಹಾರವು ವೈಭವ್ ಸೂರ್ಯವಂಶಿಯ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಅವರು ಮತದಾರರಿಗೆ ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸಿದ್ದಾರೆ. “ಕ್ರಿಕೆಟ್ ಮೈದಾನದಲ್ಲಿ ನಾನು ನನ್ನ ತಂಡದ ಗೆಲುವಿಗೆ ಹೊಣೆಗಾರನಾಗಿದ್ದೇನೆ, ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಮತದಾರನು ತಮ್ಮ ಮತದಾನದ ಮೂಲಕ ದೇಶದ ಭವಿಷ್ಯ ನಿರ್ಧರಿಸುತ್ತಾರೆ,” ಎಂದು ಹೇಳಿದ್ದಾರೆ.
ಇತರೆ ಸ್ವೀಪ್ ಐಕಾನ್ಸ್:
ಈ ಬಾರಿ ನಟ ಚಂದನ್ ರೈ, ಪಂಕಜ್ ಝಾ, ವುಶು ಆಟಗಾರ್ತಿ ಸೌಮ್ಯ ಆನಂದ್, ಹಾಕಿ ಆಟಗಾರ್ತಿ ಜ್ಯೋತಿ ಕುಮಾರಿ, ಸಾಮಾಜಿಕ ಕಾರ್ಯಕರ್ತೆ ತಬಸ್ಸುಮ್ ಅಲಿ ಹಾಗೂ ಚಿತ್ರಕಲಾವಿದ ಅಶೋಕ್ ಕುಮಾರ್ ವಿಶ್ವಾಸ್ ಅವರನ್ನು ಸಹ ಸ್ವೀಪ್ ಐಕಾನ್ಸ್ ಆಗಿ ಆಯ್ಕೆ ಮಾಡಲಾಗಿದೆ. ಇವರ ಮುಖಾಂತರ ಮತದಾನ ಜಾಗೃತಿ ಕಾರ್ಯಕ್ರಮಗಳು ಬಿಹಾರದೆಲ್ಲೆಡೆ ನಡೆಯಲಿವೆ.