ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ಕ್ರಿಕೆಟರ್ ಮತ್ತು ತೆಲಂಗಾಣ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾದ ಮೊಹಮ್ಮದ್ ಅಜರುದ್ದೀನ್ ಅವರಿಗೆ ಚುನಾವಣೆಗೆ ಸ್ಪರ್ಧಿಸದೇ ಸಚಿವ ಸ್ಥಾನ ಲಭಿಸಿದೆ. ಅವರು ರೇವಂತ್ ರೆಡ್ಡಿಯವರ ಸಂಪುಟದ 16ನೇ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಧ್ಯಾಹ್ನ 12.30 ಕ್ಕೆ ತೆಲಂಗಾಣದ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಅಜರುದ್ದೀನ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ವೇಳೆ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಮಂತ್ರಿಗಳು, ಶಾಸಕರು ಹಾಗೂ ಅಜರುದ್ದೀನ್ ಅವರ ಕುಟುಂಬದವರು ಹಾಜರಿದ್ದರು. ಅಜರುದ್ದೀನ್ ಅವರು ಇಂಗ್ಲಿಷ್ ಭಾಷೆಯಲ್ಲಿ “In the name of Allah” ಎಂದು ಪ್ರಾರಂಭಿಸಿ ಕೊನೆಯಲ್ಲಿ “ಜೈ ಹಿಂದ್, ಜೈ ತೆಲಂಗಾಣ” ಎಂದು ಹೇಳಿ ಪ್ರಮಾಣವಚನ ಮುಗಿಸಿದರು. ಅವರಿಗೆ ಯಾವ ಖಾತೆ ನೀಡಲಾಗುತ್ತದೆ ಎಂಬುದನ್ನು ಇಂದು ಅಥವಾ ನಾಳೆ ಮುಖ್ಯಮಂತ್ರಿ ಪ್ರಕಟಿಸುವ ನಿರೀಕ್ಷೆಯಿದೆ.
ಆಶ್ಚರ್ಯಕರ ಸಂಗತಿ ಎಂದರೆ, ಅಜರುದ್ದೀನ್ ಅವರು ಇನ್ನೂ ಯಾವುದೇ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿಲ್ಲ. ಅವರು ಈಗಾಗಲೇ ವಿಧಾನ ಪರಿಷತ್ ಸದಸ್ಯರೂ ಅಲ್ಲ. ಆದರೂ, ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಅಜರುದ್ದೀನ್ ಅವರನ್ನು ಸಂಪುಟಕ್ಕೆ ಸೇರಿಸಿದ್ದಾರೆ.
ಮುಸ್ಲಿಂ ಬಹುಳ್ಯದ ಜ್ಯುಬಿಲಿಹಿಲ್ಸ್ ಕ್ಷೇತ್ರದಲ್ಲಿ ನವೆಂಬರ್ 11ರಂದು ನಡೆಯಲಿರುವ ಉಪಚುನಾವಣೆಗೆ ಅಜರುದ್ದೀನ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಈ ಕ್ಷೇತ್ರದಲ್ಲಿ ಶೇ.25ರಷ್ಟು ಮುಸ್ಲಿಂ ಮತದಾರರಿದ್ದಾರೆ. ಪಕ್ಷದ ಒಳಗಿನ ಅಂದಾಜು ಪ್ರಕಾರ, ಅಜರುದ್ದೀನ್ ಗೆಲುವು ನಿಶ್ಚಿತ ಎಂದು ವಿಶ್ವಾಸದಿಂದಲೇ ಸಚಿವ ಸ್ಥಾನ ನೀಡಲಾಗಿದೆ.
2023ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕದಿಂದಲೇ ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ನೀಡುವ ಬೇಡಿಕೆ ಕೇಳಿಬರುತ್ತಿತ್ತು. ಅಜರುದ್ದೀನ್ ಅವರ ಸೇರ್ಪಡೆಯೊಂದಿಗೆ ಆ ಕಾಯುವಿಕೆಗೂ ಕೊನೆ ಕಂಡಿದೆ. ಪ್ರಸ್ತುತ ಅವರು ರೇವಂತ್ ಸಂಪುಟದಲ್ಲಿ ಏಕೈಕ ಮುಸ್ಲಿಂ ಸಚಿವರಾಗಿದ್ದು, ಇನ್ನೂ ಎರಡು ಸಚಿವ ಸ್ಥಾನಗಳು ಶೀಘ್ರದಲ್ಲೇ ಭರ್ತಿ ಆಗುವ ಸಾಧ್ಯತೆಯಿದೆ.

