Thursday, December 18, 2025

ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಆಸ್ಪತ್ರೆಗೆ ದಾಖಲು: ವೈದ್ಯರು ಕೊಟ್ರು ಬಿಗ್ ಅಲರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಧೀಡಿರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡುತ್ತಿರುವ ಜೈಸ್ವಾಲ್, ಪಂದ್ಯದ ನಂತರ ತೀವ್ರ ಅಸ್ವಸ್ತರಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು.

ವರದಿಯ ಪ್ರಕಾರ, ಪಂದ್ಯದ ಸಮಯದಲ್ಲಿ ಜೈಸ್ವಾಲ್​ಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಜೈಸ್ವಾಲ್ ಅವರನ್ನು ತಕ್ಷಣ ಪಿಂಪ್ರಿ ಚಿಂಚ್‌ವಾಡ್‌ನ ಆದಿತ್ಯ ಬಿರ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಜೈಸ್ವಾಲ್​ಗೆ ಸಿಟಿ ಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಮಾಡಲಾಗಿದ್ದು, ವೈದ್ಯರು ಅವರಿಗೆ ಸಾಕಷ್ಟು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರಿಗೆ ಸದ್ಯಕ್ಕೆ ಕ್ರಿಕೆಟ್ ಆಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಜೈಸ್ವಾಲ್‌ಗೆ ಇಂಟ್ರಾವೆನಸ್ ಔಷಧ ನೀಡಲಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಆದಾಗ್ಯೂ ಜೈಸ್ವಾಲ್‌ ಪ್ರಸ್ತುತ ಭಾರತ ತಂಡದಿಂದ ಹೊರಗಿದ್ದು, ಅವರಿಗೆ ಸದ್ಯದಲ್ಲಿ ಯಾವುದೇ ಸರಣಿಗಳಿಲ್ಲ. ಭಾರತ ತಂಡ ಟಿ20 ಸರಣಿಯನ್ನು ಆಡುತ್ತಿದ್ದು, ಆ ಸರಣಿಗೆ ಜೈಸ್ವಾಲ್ ಆಯ್ಕೆಯಾಗಿಲ್ಲ. ಜೈಸ್ವಾಲ್ ಭಾರತ ಟೆಸ್ಟ್ ತಂಡದಲ್ಲಿ ಮಾತ್ರ ಆಡುತ್ತಿದ್ದು, ಈ ವರ್ಷ ಭಾರತ ತಂಡ ಯಾವುದೇ ಟೆಸ್ಟ್ ಸರಣಿಯನ್ನು ಹೊಂದಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿದ ನಂತರ, ಟೀಂ ಇಂಡಿಯಾ ತನ್ನ ಮುಂದಿನ ಸರಣಿಯನ್ನು ಮುಂದಿನ ವರ್ಷ ಆಡಲಿದೆ. ಜನವರಿಯಲ್ಲಿ ನ್ಯೂಜಿಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಉಭಯ ತಂಡಗಳ ನಡುವೆ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳು ನಡೆಯಲಿವೆ. ಏಕದಿನ ಸರಣಿ ಜನವರಿ 11 ರಂದು ಮತ್ತು ಟಿ20 ಸರಣಿ ಜನವರಿ 21 ರಂದು ಆರಂಭವಾಗಲಿದೆ. ಜೈಸ್ವಾಲ್‌ಗೆ ಈ ಎರಡೂ ತಂಡಗಳಲ್ಲಿ ಅವಕಾಶ ಸಿಗುವುದು ಅನುಮಾನ. ಹೀಗಾಗಿ ಅವರು ಮುಂದಿನ ವರ್ಷ ಆಗಸ್ಟ್​ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಪರ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿರುವ ಕಾರಣ ಜೈಸ್ವಾಲ್‌ ಚೇತರಿಕೆಗೆ ಸಾಕಷ್ಟು ಸಮಯ ಸಿಗಲಿದೆ.

error: Content is protected !!