March 23, 2026
Monday, March 23, 2026
spot_img

ಬೆಳೆ ಹೋಯ್ತು, ಆರೋಗ್ಯವೂ ಕೆಡ್ತು; ಅದಿರು ಸಾಗಾಣಿಕೆ ಲಾರಿಗಳ ವಿರುದ್ಧ ರೈತ ಸಂಘದ ಸಮರ

ಹೊಸದಿಗಂತ ಚಿತ್ರದುರ್ಗ:

ಜಿಲ್ಲೆಯ ಭೀಮಸಮುದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗಣಿ ಅದಿರು ಸಾಗಾಣಿಕೆ ಮಾಡುವ ಲಾರಿಗಳ ಅತಿಯಾದ ಸಂಚಾರದಿಂದ ಸಾರ್ವಜನಿಕರ ಜೀವನ ದುಸ್ತರವಾಗಿದ್ದು, ಇದನ್ನು ಖಂಡಿಸಿ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ತಮ್ಮ ಅಳಲನ್ನು ತೋಡಿಕೊಂಡರು. ಕಳೆದ 15 ವರ್ಷಗಳಿಂದ ದೂಳಿನ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಈಗ ಅದು ಮಿತಿಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಾರಿಗಳು ಎಬ್ಬಿಸುವ ದೂಳಿನಿಂದಾಗಿ ಗ್ರಾಮದ ಮಕ್ಕಳು ಮತ್ತು ವೃದ್ಧರು ಅಸ್ತಮಾ ಹಾಗೂ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ರಸ್ತೆ ಅಕ್ಕಪಕ್ಕದ ಜಮೀನುಗಳಿಗೆ ದೂಳು ಆವರಿಸುತ್ತಿರುವುದರಿಂದ ಬೆಳೆಗಳು ನಾಶವಾಗುತ್ತಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ.

ಮನೆಗಳಲ್ಲಿ ವಾಸಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನವಿಡೀ ಲಾರಿಗಳ ಸಂಚಾರದಿಂದ ಶಬ್ದ ಮಾಲಿನ್ಯ ಮತ್ತು ದೂಳು ಮನೆಗಳನ್ನು ಆವರಿಸುತ್ತಿದೆ.

“ನಾವು ಗಣಿಗಾರಿಕೆಯ ವಿರೋಧಿಗಳಲ್ಲ, ಆದರೆ ಜನರ ಮತ್ತು ಜಾನುವಾರುಗಳ ಜೀವಕ್ಕೆ ಕುತ್ತು ತರುತ್ತಿರುವ ಈ ಲಾರಿ ಸಂಚಾರಕ್ಕೆ ತಕ್ಷಣ ಪರ್ಯಾಯ ಮಾರ್ಗವನ್ನು ಕಲ್ಪಿಸಬೇಕು” ಎಂದು ರೈತ ಮುಖಂಡರು ಒತ್ತಾಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !