Wednesday, November 5, 2025

ನೋಡಲ್ ಅಧಿಕಾರಿ ಹೆಸರಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಕೋಟಿ ಪಂಗನಾಮ! 6 ಜನರ ಜೇಬಿಗೆ ಕತ್ತರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ನೋಡಲ್ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಗೋಕುಲ ರಸ್ತೆಯ ರೇಣುಕಾನಗರದಲ್ಲಿ ನಿವೇಶನ ಕೊಡಿಸುವುದಾಗಿ ಆರು ಜನರಿಗೆ ಒಟ್ಟು ₹1.78 ಕೋಟಿ ವಂಚಿಸಿರುವ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಶ್ವಾಪುರದ ಇಸ್ಮಾಯಿಲ್‌ಅಬ್ದುಲ್ ಗನಿಸಾಬ ಮನಿಯಾರ್ ಎಂಬಾತ ಈ ವಂಚನೆಯ ಸೂತ್ರಧಾರ. ಈತ ಪವನ ಕಟ್ಟಿ, ಡಾ. ಕೃಪಾ ಬಿಜಪುರ, ಡಾ. ಚೇತನ ಹೊಸಕಟ್ಟಿ, ಡಾ. ರೀನಾ, ಡಾ. ಶಂಭು ಕೆ., ಹಾಗೂ ರಶ್ಮಿ ಹೊಸಕಟ್ಟಿ ಅವರಿಗೆ ವಂಚಿಸಿದ್ದಾನೆ.

ವಂಚಕ ಇಸ್ಮಾಯಿಲ್, ಡಾ. ಶಂಭು ಕೆ. ಅವರಿಗೆ ಪರಿಚಯವಾಗಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೇಣುಕಾನಗರದಲ್ಲಿ ನಿರ್ಮಿಸಲಾದ ನಿವೇಶನಗಳನ್ನು ಕೊಡಿಸುವುದಾಗಿ ನಂಬಿಸಿದ್ದ. ಇವನ ಮಾತು ನಂಬಿದ ಡಾ. ಶಂಭು ಅವರು, ತಮ್ಮ ಸ್ನೇಹಿತರಿಗೂ ಈ ವಿಷಯ ತಿಳಿಸಿದ್ದಾರೆ. ಆಗ ಎಲ್ಲರೂ ಸೇರಿ ಪ್ಲಾಟ್ ಖರೀದಿಸಲು ತೀರ್ಮಾನಿಸಿದ್ದಾರೆ.

ಆ ಬಳಿಕ, ಆರೋಪಿ ಇಸ್ಮಾಯಿಲ್, ಪ್ರತಿ ಪ್ಲಾಟ್‌ಗೆ ₹99,12,000 ಆಗುತ್ತದೆ ಎಂದು ಹೇಳಿ, ಅದನ್ನು ಮೂರು ಕಂತುಗಳಲ್ಲಿ ಪಾವತಿಸಬೇಕೆಂದು ತಿಳಿಸಿದ್ದಾನೆ. ಮೊದಲಿಗೆ ಪ್ರತಿ ಖರೀದಿದಾರರು ₹33 ಲಕ್ಷ ಮೊದಲ ಕಂತು ಹಾಗೂ ₹4.50 ಲಕ್ಷ ಚಲನ್ ಪಾವತಿಗಾಗಿ ನೀಡಬೇಕು ಎಂದು ಹೇಳಿ ಹಣ ಪಡೆದಿದ್ದಾನೆ.

ಖರೀದಿದಾರರ ನಂಬಿಕೆಯನ್ನು ಗಳಿಸಲು ಆರೋಪಿಯು, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಸಹಿ ಇರುವ ನಕಲಿ ದಾಖಲೆಗಳನ್ನು ನೀಡಿ ಹಣ ಪಡೆದುಕೊಂಡು ವಂಚಿಸಿದ್ದಾನೆ. ಈ ಕುರಿತು ಸಂತ್ರಸ್ತರಾದ ಪವನ ಕಟ್ಟಿ ಅವರು ನೀಡಿದ ದೂರಿನನ್ವಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!