Tuesday, December 23, 2025

ಷೇರು ಮಾರುಕಟ್ಟೆ ಲಾಭ ತೋರಿಸಿ 76 ಲಕ್ಷ ರೂ. ವಂಚಿಸಿದ ಸೈಬರ್ ವಂಚಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ದಿನೇ ದಿನೇ ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು. ಪೊಲೀಸರು ಎಷ್ಟೇ ಜಾಗೃತಿ, ಮಾಹಿತಿ ನೀಡಿದರೂ ವಂಚನೆಗೆ ಒಳಗಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದೀಗ ಅಂತಹುದೇ ಪ್ರಕರಣವೊಂದು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.

ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭದ ಆಸೆ ತೋರಿಸಿ ಸೈಬರ್ ವಂಚಕರು ದಾವಣಗೆರೆ ನಗರದ ವಿನಾಯಕ ಬಡಾವಣೆಯ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 76.48 ಲಕ್ಷ ರೂ. ಹಣ ದೋಚಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ನಿಧಾನವಾಗಿ ನಂಬಿಕೆ ಗಳಿಸಿದ ವಂಚಕರು ಈ ಕೃತ್ಯ ಎಸಗಿದ್ದಾರೆ.

ವಂಚಿತ ವ್ಯಕ್ತಿಗೆ ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ದೊಡ್ಡ ಲಾಭ ಸಿಗುತ್ತದೆ ಎಂದು ಭರವಸೆ ನೀಡಿದ್ದಾನೆ. ಆರಂಭದಲ್ಲಿ ಸಣ್ಣ ಮೊತ್ತ ಹೂಡಿಕೆ ಮಾಡಲು ಪ್ರೇರೇಪಿಸಿ, ನಂತರ ಲಾಭದ ನಕಲಿ ಮಾಹಿತಿ ನೀಡಿ ಹೆಚ್ಚಿನ ಹಣ ಹೂಡಲು ಒತ್ತಾಯಿಸಿದ್ದಾರೆ. ಈ ಮಾತುಗಳನ್ನು ನಂಬಿದ ವ್ಯಕ್ತಿ, ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ.

ಆರಂಭದಲ್ಲಿ ಎಲ್ಲವೂ ಸರಿಯಾಗಿರುವಂತೆ ತೋರಿಸಿದ ವಂಚಕರು, ಕೆಲ ದಿನಗಳ ನಂತರ ಹಣ ಹಿಂಪಡೆಯಲು ಯತ್ನಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ. ಆಗಲೇ ದೊಡ್ಡ ಪ್ರಮಾಣದ ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಾಗಿ, ತಕ್ಷಣವೇ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ವರ್ಗಾವಣೆಯ ವಿವರಗಳು ಮತ್ತು ಆನ್‌ಲೈನ್ ಸಂಪರ್ಕದ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ್ದಾರೆ.

error: Content is protected !!