ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸಿಲಿಕಾನ್ ವ್ಯಾಲಿ, ಐಟಿ ಕ್ಯಾಪಿಟಲ್ ಬೆಂಗಳೂರು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದು. ಆದರೆ, ಬೆಂಗಳೂರಿನಲ್ಲಿ ನಿತ್ಯ ಸರಾಸರಿ 4.83 ಕೋಟಿ ರೂ. ಹಣವು ಸದ್ದಿಲ್ಲದೇ ಸೈಬರ್ ಖದೀಮರ ಪಾಲಾಗುತ್ತಿದೆ ಎಂದರೆ ನೀವು ನಂಬಲೇಬೇಕು. ಈ ಬಗ್ಗೆ ಪೊಲೀಸ್ ಇಲಾಖೆಯ ಅಂಕಿ – ಅಂಶಗಳ ವರದಿ ಇಲ್ಲಿದೆ..
2025ರ ನವೆಂಬರ್ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 1,543.41 ಕೋಟಿ ರೂ.ಗಳನ್ನು ಸೈಬರ್ ವಂಚಕರು ದೋಚಿದ್ದಾರೆ. ರಾಜ್ಯದಲ್ಲಿ ಸೈಬರ್ ಖದೀಮರು ವಂಚಿಸಿದ ಹಣದಲ್ಲಿ ಬೆಂಗಳೂರು ಸಿಂಹಪಾಲು ಹೊಂದಿದೆ.
ಬೆಂಗಳೂರಿನಲ್ಲಿ (2025ರ ನವೆಂಬರ್ ಅಂತ್ಯ) ಒಟ್ಟು 9,326 ಪ್ರಕರಣಗಳು ದಾಖಲಾಗಿವೆ. ಆದರೆ, ಆತಂಕಕಾರಿ ಸಂಗತಿಯೆಂದರೆ, ಈ ಪೈಕಿ ಕೇವಲ 716 ಪ್ರಕರಣಗಳು ಮಾತ್ರವೇ ಪತ್ತೆಯಾಗಿವೆ. ಅಂದರೆ ಅಪರಾಧಿಗಳನ್ನು ಪತ್ತೆಹಚ್ಚುವ ಹಾಗೂ ಹಣ ಹಿಂಪಡೆದಿರುವ ಪ್ರಮಾಣ ಕೇವಲ ಶೇ 7.68ರಷ್ಟು ಮಾತ್ರ. ಮೈಸೂರಿನಲ್ಲಿ ಈ ಪತ್ತೆ ಪ್ರಮಾಣ ಕೇವಲ ಶೇ 1.81ರಷ್ಟಿದೆ.
ಬೆಂಗಳೂರು ನಗರ: ನಷ್ಟ – ₹1,543.41 ಕೋಟಿ, ಪತ್ತೆ ಪ್ರಮಾಣ – ಶೇ.7.68, ಬೆಂಗಳೂರು ಗ್ರಾಮಾಂತರ ಜಿಲ್ಲೆ: ನಷ್ಟ- ₹49.85 ಕೋಟಿ, ಪತ್ತೆ ಪ್ರಮಾಣ – ಶೇ.6.77, ಮಂಗಳೂರು ನಗರ: ನಷ್ಟ – ₹33.78 ಕೋಟಿ, ಪತ್ತೆ ಪ್ರಮಾಣ – ಶೇ. 8.06, ಮೈಸೂರು ನಗರ: ನಷ್ಟ – ₹33.17 ಕೋಟಿ, ಪತ್ತೆ ಪ್ರಮಾಣ – ಶೇ.1.81, ಚಿಕ್ಕಬಳ್ಳಾಪುರ ಜಿಲ್ಲೆ: ನಷ್ಟ – ₹28.13 ಕೋಟಿ, ಪತ್ತೆ ಪ್ರಮಾಣ – ಶೇ. 6.81ರಷ್ಟಿದೆ.

