ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಮೂಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಅವರ ಹಣೆಬರಹದಲ್ಲಿ ಬರೆದಿದ್ದರೆ ಮಾತ್ರ ಸಾಧ್ಯ, ಇಲ್ಲದಿದ್ದರೆ ಇಲ್ಲ. “ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.
ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುರೇಶ್ ಅವರು, ಈ ಹಿಂದೆ ತಮ್ಮ ಅಣ್ಣನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿದೆ ಎಂದು ಹೇಳಿದ್ದ ಮಾತಿನ ಕುರಿತು ಸ್ಪಷ್ಟನೆ ನೀಡಿದರು. ಆಸೆಯಿದೆ ಎಂದಿದ್ದರೂ, ಅದು ಅವರ ಹಣೆಬರಹದಲ್ಲಿ ಬರೆದಿದ್ದರೆ ಆಗುತ್ತದೆ, ಇಲ್ಲದಿದ್ದರೆ ಆಗುವುದಿಲ್ಲ. ಅಲ್ಲದೆ, ಡಿ.ಕೆ.ಶಿವಕುಮಾರ್ ಅವರು ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಒತ್ತಿ ಹೇಳಿದರು.
ಶಿವಕುಮಾರ್ ಅವರು ಪ್ರಸ್ತುತ ಪಕ್ಷದ ಅಧ್ಯಕ್ಷರಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಪಕ್ಷದ ಏಳಿಗೆ ಮತ್ತು ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದಾರೆ. ಅವರು ಪಕ್ಷದ ನಿಷ್ಠೆಗೆ ಬದ್ಧರಾಗಿದ್ದಾರೆ ಎಂದು ಸುರೇಶ್ ತಿಳಿಸಿದರು.
‘ನವೆಂಬರ್ ಕ್ರಾಂತಿ’ಯ ಕುರಿತು ಡಿ.ಕೆ.ಶಿವಕುಮಾರ್ ಅವರು ಗಮನ ಹರಿಸುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್, “ಪಕ್ಷದ ಅಧ್ಯಕ್ಷರಾಗಿ ಅವರು ಎಲ್ಲರನ್ನೂ ಸಮಾನವಾಗಿ ನೋಡಬೇಕಿರುವುದು ಅವರ ಕರ್ತವ್ಯ” ಎಂದು ಸ್ಪಷ್ಟಪಡಿಸಿದರು.
ನವೆಂಬರ್ 15 ರ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆಯೇ ಎಂಬ ಪ್ರಶ್ನೆಗೆ ಸುರೇಶ್ ಅವರು ತೀಕ್ಷ್ಣವಾಗಿ ಉತ್ತರಿಸಿದರು: “ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವು, ನೀವೆಲ್ಲರೂ ಸೇರಿ ಈ ಹಬ್ಬವನ್ನು ಆಚರಣೆ ಮಾಡೋಣ.” ರಾಜಕೀಯ ವಿಚಾರಗಳ ಕುರಿತು ತಮಗೆ ತಿಳಿದಿಲ್ಲ, ಈ ಪ್ರಶ್ನೆಗಳನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಯವರು ಅಥವಾ ಎಐಸಿಸಿ ನಾಯಕರಿಗೆ ಕೇಳಬೇಕು ಎಂದು ತಿಳಿಸಿದರು.

                                    