ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ಮುಂಡಗೋಡು ಟಿಬೆಟಿಯನ್ ಶಿಬಿರದಲ್ಲಿ 45 ದಿನಗಳ ವಾಸ್ತವ್ಯ ಹೂಡಲಿದ್ದಾರೆ.
ರಾಜ್ಯ ಸರ್ಕಾರದ ಪರವಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ದಲೈಲಾಮಾ ಅವರನ್ನು ಬರಮಾಡಿಕೊಂಡರು. ದಲೈ ಲಾಮಾ ಅವರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರಿನಲ್ಲಿ ಮುಂಡಗೋಡ ಶಿಬಿರಕ್ಕೆ ತೆರಳಿದರು.
ಕೇಂದ್ರ ಗೃಹ ಸಚಿವಾಲಯ ವಿದೇಶಿ ಪ್ರಜೆಗಳಿಗೆ PAP ಪರವಾನಗಿ ಅಥವಾ ಸಂರಕ್ಷಿತ ಪ್ರದೇಶ ಪರವಾನಗಿಯನ್ನು ಕೋರಿದೆ. ಭಾರತೀಯ ಸಂದರ್ಶಕರನ್ನು ಹೊರತುಪಡಿಸಿ ಯಾರಾದರೂ ಮುಂದಿನ 45 ದಿನಗಳವರೆಗೆ ಮುಂಡಗೋಡದಲ್ಲಿರುವ ಶಿಬಿರಕ್ಕೆ ಭೇಟಿ ನೀಡಲು ಪೂರ್ವಾನುಮತಿ ಪಡೆಯಬೇಕು. ನೇಪಾಳ ಮತ್ತು ಭೂತಾನ್ ನಾಗರಿಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅವರು ಸರ್ಕಾರ ನೀಡುವ ಗುರುತಿನ ಚೀಟಿಗಳನ್ನು ಕೊಂಡೊಯ್ಯಬಹುದಾಗಿದೆ.
ದಲೈ ಲಾಮಾ ಅವರ ಭೇಟಿಯಿಂದಾಗಿ ಟಿಬೆಟಿಯನ್ ಆಡಳಿತ ಮತ್ತು MHA ವಿದೇಶಿ ಸಂದರ್ಶಕರಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅವರು ತಮ್ಮ ಉತ್ತರಾಧಿಕಾರಿಯ ಬಗ್ಗೆ ಚರ್ಚಿಸಲು ತಮ್ಮ ಸಹವರ್ತಿ ಹಿರಿಯ ಸನ್ಯಾಸಿಗಳು ಮತ್ತು ಟಿಬೆಟಿಯನ್ ಸರ್ಕಾರದ ಆಡಳಿತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸುವ ನಿರೀಕ್ಷೆಯಿದೆ. ಆದ್ದರಿಂದ ಜಾಗತಿಕವಾಗಿ ಅನೇಕ ಗುಪ್ತಚರ ಸಂಸ್ಥೆಗಳು ದಲೈ ಲಾಮಾ ಅವರ ಮುಂಡಗೋಡ ಭೇಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

