February 9, 2026
Monday, February 9, 2026
spot_img

ಸುದೀರ್ಘ 58 ದಿನಗಳ ಪ್ರವಾಸ ಮುಗಿಸಿ ಧರ್ಮಶಾಲಾಕ್ಕೆ ಮರಳಿದ ದಲೈಲಾಮಾ

ಹೊಸದಿಗಂತ ವರದಿ ಮುಂಡಗೋಡ:

ಶಾಂತಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಸೋಮವಾರ ಬೆಳಿಗ್ಗೆ ಟಿಬೆಟಿಯನ್ ಕಾಲೊನಿಯಿಂದ ಮುಂಡಗೋಡದಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳಿದರು.

ಹಿರಿಯ ಬೌದ್ಧ ಸನ್ಯಾಸಿಗಳು, ಟಿಬೆಟಿಯನ್ ಕಾಲೋನಿಯ ಎಲ್ಲಾ ಕ್ಯಾಂಪ್‌ನ ಮುಖ್ಯಸ್ಥರು, ಬಿಕ್ಕುಗಳು, ದಲೈಲಾಮಾರ ತಾಲೂಕಾ ಪ್ರತಿನಿಧಿ ಅವರು ದಲೈಲಾಮಾ ಅವರನ್ನು ಸಾಂಪ್ರದಾಯಿಕವಾಗಿ ಬೀಳ್ಕೊಟ್ಟರು.

ಟಿಬೆಟಿಯನ್ ಧರ್ಮ ಗುರು ದಲೈಲಾಮಾ ಸುದೀರ್ಘ 58 ದಿನಗಳ ಪ್ರವಾಸ ಮುಗಿಸಿ, ಸೋಮವಾರ ಬೆಳಿಗ್ಗೆ ಹುಬ್ಬಳ್ಳಿ ಮೂಲಕ ಹಿಮಾಚಲ ಪ್ರದೇಶದ ಧರ್ಮಶಾಲಾಕ್ಕೆ ಮರಳಿದರು. ಕಳೆದ ವರ್ಷ ಡಿಸೆಂಬರ್ 12ರಂದು ಅವರು ತಾಲೂಕಿನ ಟಿಬೆಟಿಯನ್ ಕ್ಯಾಂಪ್‌ಗೆ ಬಂದಿದ್ದರು.
ಹಿಮಾಚಲ ಪ್ರದೇಶದಲ್ಲಿ ಚಳಿ ಹೆಚ್ಚಾಗಿರುವುದರ ಜೊತೆಗೆ ದಕ್ಷಿಣ ಭಾರತದ ಟಿಬೆಟಿಯನ್ ಕಾಲೊನಿಗಳಲ್ಲಿ ವಾಸ್ತವ್ಯ ಮಾಡುವಂತೆ ಬೌದ್ಧ ಅನುಯಾಯಿಗಳ ಬೇಡಿಕೆ ಹೆಚ್ಚಿದ್ದರಿಂದ, ಇದೇ ಮೊದಲ ಬಾರಿಗೆ ಅತಿ ಹೆಚ್ಚು ದಿನಗಳು ಇಲ್ಲಿ ತಂಗಿದ್ದರು.

ದಲೈಲಾಮಾ ಅವರು ಡಿಸೆಂಬರ್ 16ರಿಂದ ಆರಂಭಗೊಂಡು ಫೆಬ್ರುವರಿ 7ರವರೆಗೆ ಒಟ್ಟು 13 ಸಾವಿರಕ್ಕೂ ಹೆಚ್ಚು ಜನರಿಗೆ ಆಶೀರ್ವಾದಿಸಿದ್ದಾರೆ. ಇವರಲ್ಲಿ ಅತಿ ಹೆಚ್ಚು 9,479 ಟಿಬೆಟಿಯನ್ ಮತ್ತು ಹಿಮಾಚಲ ಪ್ರದೇಶದ ಬೌದ್ಧ ಅನುಯಾಯಿಗಳು ಇದ್ದಾರೆ. ಇನ್ನುಳಿದಂತೆ 2,369 ಭಾರತೀಯರು, 1,274 ವಿದೇಶಿಯರು ಭೇಟಿಯಾದರು.

ಇಲ್ಲಿನ ಡ್ರೆಪುಂಗ್ ಗೋಮಾಂಗ್ ಬೌದ್ಧ ಮಂದಿರದಲ್ಲಿ, ಭಾನುವಾರ ಹಾಗೂ ಪೂಜಾ ದಿನಗಳಂದು ಹೊರತುಪಡಿಸಿ, ಪ್ರತಿದಿನ 400ರಿಂದ 500 ಜನರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಆಶೀರ್ವಾದ ಪಡೆದಿರುವುದು ವಿಶೇಷ. ಕೇಂದ್ರ ಸಚಿವ ಕಿರಣ ರಿಜಿಜು, ರಾಜ್ಯ ಸಭೆಯ ಉಪಸಭಾಪತಿ, ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಮಧು ಬಂಗಾರಪ್ಪ, ಶಾಸಕ ಶಿವರಾಮ ಹೆಬ್ಬಾರ ಸೇರಿದಂತೆ ವಿವಿಧ ಪಕ್ಷಗಳ ಶಾಸಕರು, ಸಂಸದರು, ಮಾಜಿ ಶಾಸಕರು ದಲೈಲಾಮಾ ಅವರನ್ನು ಭೇಟಿಯಾಗಿದ್ದರು. ಅಲ್ಲದೇ, ಹಲವು ಮಠಾಧೀಶರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭೇಟಿಯಾಗಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !