March 7, 2026
Saturday, March 7, 2026
spot_img

ಮಾ.9ರ ಮೇಲೆ ‘ದಳಪತಿ’ ಅಭಿಮಾನಿಗಳ ಕಣ್ಣು: ಸೆನ್ಸಾರ್ ಅಗ್ನಿಪರೀಕ್ಷೆಯಲ್ಲಿ ‘ಜನ ನಾಯಗನ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸದ್ಯ ಇಕ್ಕಟ್ಟಿಗೆ ಸಿಲುಕಿದೆ. ತಾನು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಎರಡು ಬಹುನಿರೀಕ್ಷಿತ ಸಿನಿಮಾಗಳ ಬಿಡುಗಡೆ ಪ್ರಕ್ರಿಯೆ ಅಡೆತಡೆಗಳನ್ನು ಎದುರಿಸುತ್ತಿರುವುದು ಸಂಸ್ಥೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಾಕಿಂಗ್ ಸ್ಟಾರ್ ಯಶ್ ಅವರ ಮಾನ್‌ಸ್ಟರ್ ಮೈಂಡ್ಸ್ ಜೊತೆಗೂಡಿ ಕೆವಿಎನ್ ನಿರ್ಮಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಿಂದ ಜೂನ್ 4ಕ್ಕೆ ಮುಂದೂಡಲ್ಪಟ್ಟಿದೆ. ಆದರೆ, ಅದಕ್ಕಿಂತಲೂ ದೊಡ್ಡ ತಲೆನೋವು ಎಂದರೆ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’. ರಾಜಕೀಯ ಕಾರಣಗಳಿಂದಾಗಿ ಈ ಸಿನಿಮಾ ಬಿಡುಗಡೆಯಾಗದೆ ಹಲವು ದಿನಗಳಿಂದ ಬಾಕ್ಸ್‌ನಲ್ಲೇ ಉಳಿದುಕೊಂಡಿದೆ.

ಜನವರಿ 23ಕ್ಕೆ ತೆರೆಕಾಣಬೇಕಿದ್ದ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅಡ್ಡಿಪಡಿಸಿತ್ತು. ವಿಷಯ ನ್ಯಾಯಾಲಯದ ಮೆಟ್ಟಿಲೇರಿತ್ತಾದರೂ, ಕಾಲಹರಣ ತಡೆಯಲು ಕೆವಿಎನ್ ಸಂಸ್ಥೆ ಇದೀಗ ರಿವಿಷನ್ ಕಮಿಟಿಗೆ ಚಿತ್ರವನ್ನು ಒಪ್ಪಿಸಿದೆ. ಮಾರ್ಚ್ 09ರಂದು ಮಧ್ಯಾಹ್ನ 2 ಗಂಟೆಗೆ ರಿವಿಷನ್ ಕಮಿಟಿ ಸದಸ್ಯರು ಚಿತ್ರವನ್ನು ವೀಕ್ಷಿಸಲಿದ್ದು, ಅಂದೇ ಸಿನಿಮಾದ ಭಾಗ್ಯ ನಿರ್ಧಾರವಾಗಲಿದೆ.

ಒಂದೊಮ್ಮೆ ಸೋಮವಾರ ಸೆನ್ಸಾರ್ ಮಂಡಳಿಯಿಂದ ಹಸಿರು ನಿಶಾನೆ ಸಿಕ್ಕರೆ, ಮುಂದಿನ ಒಂದೆರಡು ವಾರಗಳಲ್ಲಿ ಚಿತ್ರಮಂದಿರಗಳಲ್ಲಿ ‘ಜನ ನಾಯಗನ್’ ಅಬ್ಬರ ಶುರುವಾಗಲಿದೆ. ಆದರೆ, ಸೆನ್ಸಾರ್ ಮಂಡಳಿ ಮತ್ತೆ ಯಾವುದಾದರೂ ತಾಂತ್ರಿಕ ಕಿರಿಕ್ ಮಾಡುತ್ತಾ ಎಂಬ ಆತಂಕ ಕೆವಿಎನ್ ಸಂಸ್ಥೆಯನ್ನು ಕಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !