ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ‘ದಂಗಲ್’ ಸಿನಿಮಾದಲ್ಲಿ ಗೀತಾ ಫೋಗಟ್ ಪಾತ್ರದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಜೈರಾ ವಾಸೀಮ್ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಕ್ರವಾರ ಸಂಜೆ ತಮ್ಮ ಮದುವೆಯ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಅಪಾರ ಶುಭಾಶಯಗಳು ಹರಿದು ಬರುತ್ತಿವೆ.
ಫೋಟೋಗಳಲ್ಲಿ ಜೈರಾ ನಿಕಾನಾಮಕ್ಕೆ ಸಹಿ ಹಾಕುತ್ತಿರುವ ಕ್ಷಣವನ್ನು ಕಾಣಬಹುದು. ಮತ್ತೊಂದು ಫೋಟೋದಲ್ಲಿ ಅವರು ತಮ್ಮ ಪತಿಯೊಂದಿಗೆ ಆಕಾಶವನ್ನು ನೋಡುತ್ತಿರುವ ದೃಶ್ಯ ಗಮನ ಸೆಳೆದಿದೆ. ಜೈರಾ ಕೆಂಪು ಬಣ್ಣದ ಕಸೂತಿ ಸ್ಕಾರ್ಫ್ ಧರಿಸಿದ್ದು, ಅವರ ಪತಿ ಕ್ರೀಮ್ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಜೈರಾ ತಮ್ಮ ಪತಿಯ ಹೆಸರು ಅಥವಾ ಮುಖವನ್ನು ಬಹಿರಂಗಪಡಿಸಿಲ್ಲ.

ಪೋಸ್ಟ್‌ನಲ್ಲಿ ಅವರು “Qubool Hai x3” ಎಂದು ಬರೆದುಕೊಂಡಿದ್ದು, ಮುಸ್ಲಿಂ ಮದುವೆ ಸಂಪ್ರದಾಯದಂತೆ ಮೂರು ಬಾರಿ “ಕಬೂಲ್ ಹೇ” ಎಂದರೆ ಮದುವೆಗೆ ಸಂಪೂರ್ಣ ಒಪ್ಪಿಗೆ ನೀಡಿದ ಅರ್ಥ ಎಂದು ಅಭಿಮಾನಿಗಳು ಅರ್ಥೈಸಿದ್ದಾರೆ.
ಜೈರಾ ವಾಸೀಮ್ ಕೇವಲ 16ನೇ ವಯಸ್ಸಿನಲ್ಲಿ ‘ದಂಗಲ್’ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ನಂತರ ‘ಸೀಕ್ರೆಟ್ ಸೂಪರ್‌ಸ್ಟಾರ್’ ಸಿನಿಮಾದಲ್ಲೂ ಅವರ ಅಭಿನಯ ಬಹು ಪ್ರಶಂಸೆಗೆ ಪಾತ್ರವಾಯಿತು. ಆದರೆ 2019ರಲ್ಲಿ ಅವರು ನಟನೆಯನ್ನು ಸಂಪೂರ್ಣವಾಗಿ ತೊರೆಯುವುದಾಗಿ ಘೋಷಿಸಿದ್ದರು. ತಮ್ಮ ಧಾರ್ಮಿಕ ನಂಬಿಕೆ ಮತ್ತು ಚಿತ್ರರಂಗದ ಬದುಕು ಪರಸ್ಪರ ವಿರೋಧಿಸುತ್ತಿವೆ ಎಂದು ಅವರು ತಿಳಿಸಿದ್ದರು.
ಅಂದಿನಿಂದ ಜೈರಾ ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅವರು ಹೊಸ ಜೀವನದ ಹಾದಿಯನ್ನೇ ಹಿಡಿದಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ಜೀವನದ ಹೊಸ ಅಧ್ಯಾಯಕ್ಕೆ ಹಾರೈಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.