ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಇತ್ತೀಚೆಗಷ್ಟೇ 30 ಕೃಷ್ಣಮೃಗಗಳು ನಿಗೂಢವಾಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಇದೀಗ ಕಲ್ಪತರು ನಾಡು ತುಮಕೂರಿನಲ್ಲಿ ಮಂಗಗಳ ಸರಣಿ ಸಾವು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಇಲ್ಲಿನ ಪ್ರಸಿದ್ಧ ದೇವರಾಯನದುರ್ಗ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಲ್ಲಿ ಬರೋಬ್ಬರಿ 11 ಮಂಗಗಳು ಸಾವನ್ನಪ್ಪಿವೆ.
ದೇವರಾಯನದುರ್ಗ ಹಾಗೂ ದುರ್ಗದ ಹಳ್ಳಿ ನಡುವಿನ ಅರಣ್ಯ ಪ್ರದೇಶದಲ್ಲಿ ಮಂಗಗಳ ಮೃತದೇಹಗಳು ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಅರಣ್ಯದಲ್ಲಿ ಶೋಧ ನಡೆಸಿದಾಗ, ಮೊದಲ ದಿನ ಏಳು ಹಾಗೂ ಎರಡನೇ ದಿನ ನಾಲ್ಕು ಮಂಗಗಳ ಶವಗಳು ಪತ್ತೆಯಾಗಿವೆ. ಮೃತಪಟ್ಟವುಗಳಲ್ಲಿ 9 ಸಾಮಾನ್ಯ ಮಂಗಗಳಾಗಿದ್ದರೆ, 2 ಲಂಗೂರಗಳಾಗಿವೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಮಂಗಗಳು ಯಾವುದೇ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿಲ್ಲ ಎಂಬುದು ದೃಢಪಟ್ಟಿದೆ. ಊರ್ಡಿಗೆರೆಯ ಪಶು ಆಸ್ಪತ್ರೆಯಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯ ವೇಳೆ ಮಂಗಗಳ ಕರುಳಿನಲ್ಲಿ ‘ಅನ್ನ’ ಪತ್ತೆಯಾಗಿದ್ದು, ಅನ್ನದಲ್ಲಿ ವಿಷ ಬೆರೆಸಿ ಈ ಕೃತ್ಯ ಎಸಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಲು ಮಂಗಗಳ ದೇಹದ ಮಾದರಿಗಳನ್ನು ಬೆಂಗಳೂರಿನ ಪಶು ವೈದ್ಯಕೀಯ ವಿದ್ಯಾಲಯಕ್ಕೆ ರವಾನಿಸಲಾಗಿದೆ. ಈ ಸಂಬಂಧ ತುಮಕೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗಗಳನ್ನು ಉದ್ದೇಶಪೂರ್ವಕವಾಗಿ ಸಾಯಿಸಲಾಗಿದೆಯೇ ಅಥವಾ ಇದರ ಹಿಂದೆ ಯಾರಾದರೂ ದುಷ್ಕರ್ಮಿಗಳ ಕೈವಾಡವಿದೆಯೇ ಎಂಬ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.

