ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಗೆ ಈಗ ಮತ್ತೆ ಬೆನ್ನುನೋವು ತೀವ್ರವಾಗಿ ಕಾಡುತ್ತಿದೆ, ಜೊತೆಗೆ ಹಳೆಯ ಕಾರು ಅಪಘಾತದ ಗಾಯದ ಕಾರಣದಿಂದ ಮೊಣಕೈ ನೋವು ಕೂಡ ಉಲ್ಬಣಗೊಂಡಿರುವುದು ವರದಿಯಾಗಿದೆ. ಕಳೆದ ಒಂದು ವಾರದಿಂದ ಬೆನ್ನು ನೋವು ತೀವ್ರವಾಗಿದ್ದು, ಜೈಲಿನ ನೆಲದ ಮೇಲೆ ಮಲಗುವ ಮೂಲಕ ನೋವು ಹೆಚ್ಚಾಗಿದೆ ಎಂದು ದರ್ಶನ್ ಹೇಳಿದ್ದು, ನಟನ ಮನವಿಯ ಮೇರೆಗೆ ಸಿ.ವಿ. ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೈದ್ಯರು ತಪಾಸಣೆಯ ನಂತರ, ದರ್ಶನ್ ಅವರಿಗೆ ವಾರಕ್ಕೆ ಕನಿಷ್ಠ ನಾಲ್ಕು ಬಾರಿ ಫಿಜಿಯೋಥೆರಪಿ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಮೊಣಕೈ ಮತ್ತು ಎರಡು ಬೆರಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲು ವೈದ್ಯರು ಮುಂದಾಗಿದ್ದಾರೆ.
ಈ ಹಿಂದೆ ಇದೇ ಕೇಸಿನಲ್ಲಿ ಬಳ್ಳಾರಿ ಜೈಲಿನಲ್ಲಿ ಇದ್ದಾಗಲೂ ದರ್ಶನ್ ಅವರು ಬೆನ್ನುನೋವು ವಿಪರೀತವಾಗಿದೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಮಧ್ಯಂತರ ಜಾಮೀನು ಪಡೆದು ಬೆಂಗಳೂರಿಗೆ ಬಂದಿದ್ದರು. ಜಾಮೀನಿನ ನಂತರ ನಟ ದರ್ಶನ್ ಕೆಲವು ತಿಂಗಳು ಜನಸಾಮಾನ್ಯರಂತೆ ಓಡಾಡಿ ‘ಡೆವಿಲ್’ ಸಿನಿಮಾದ ಶೂಟಿಂಗ್‌ಗಳಲ್ಲಿ ಭಾಗವಹಿಸಿದ್ದರು. ಆದರೆ, ಹೈಕೋರ್ಟ್ ನೀಡಿದ್ದ ಜಾಮೀನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ಕಾರಣ ದರ್ಶನ್ ಪುನಃ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಈಗ ದರ್ಶನ್ ತಮ್ಮ ಹಾಸಿಗೆ, ದಿಂಬು ಕೋರಿಕೆ ಸಲ್ಲಿಸಿದ್ದು, ನೆಲದ ಮೇಲೆ ಮಲಗಲು ಆಗದೆ ತೀವ್ರ ನೋವು ಅನುಭವಿಸುತ್ತಿದ್ದಾರೆ.