Tuesday, September 9, 2025

ಜೈಲಿನಲ್ಲಿ ದಾಸನ ಗೋಳಾಟ: ನನಗೆ ವಿಷ ಕೊಡಿ ಎಂದು ಜಡ್ಜ್​ ಎದುರು ಬೇಡಿಕೆ ಇಟ್ಟ ದರ್ಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಅವರಿಗೆ ಮೊದಲ ಹಂತದಲ್ಲಿ ಜಾಮೀನು ಸಿಕ್ಕಿದ್ದರೂ, ಸುಪ್ರೀಂ ಕೋರ್ಟ್ ಆ ಜಾಮೀನನ್ನು ರದ್ದುಪಡಿಸಿತ್ತು. ಬಳಿಕದಿಂದ ಅವರು ಜೈಲಿನಲ್ಲೇ ಕಠಿಣ ನಿಯಮಗಳ ನಡುವೆಯೇ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ವಿಚಾರಣೆಯಲ್ಲಿ ಅವರು ನ್ಯಾಯಾಧೀಶರ ಮುಂದೆ ಅಚ್ಚರಿಯ ಮನವಿಯೊಂದನ್ನು ಇಟ್ಟು, ಎಲ್ಲರ ಗಮನ ಸೆಳೆದಿದ್ದಾರೆ.

ವಿಚಾರಣೆಗೆ ವೀಡಿಯೊ ಕಾಲ್ ಮೂಲಕ ಹಾಜರಾದ ದರ್ಶನ್, ಕೈ ಎತ್ತಿ ನನ್ನ ಒಂದು ಮನವಿ ಇದೆ ಎಂದು ಆರಂಭಿಸಿದ್ದರು. ಆಗ ಕೋರ್ಟ್ ಕೇಳಿದಾಗ, “ನಾನು ಬಿಸಿಲು ನೋಡದೇ 30 ದಿನಗಳಾಗಿವೆ, ಕೈಗಳಿಗೆ ಫಂಗಸ್ ಬಂದಿದೆ. ನನಗೆ ಬೇರೆ ಏನೂ ಬೇಡ, ನನಗೆ ವಿಷ ನೀಡಲು ಆದೇಶ ಕೊಡಿ” ಎಂದು ಅವರು ನೇರವಾಗಿ ಬೇಡಿಕೆ ಇಟ್ಟರು. ದರ್ಶನ್ ಮಾತು ಕೇಳಿದ ನ್ಯಾಯಾಧೀಶರು ತಕ್ಷಣ ಪ್ರತಿಕ್ರಿಯಿಸಿ, “ಹಾಗೆಲ್ಲ ಬೇಡಿಕೆ ಇಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ದರ್ಶನ್ ಹೆಚ್ಚುವರಿ ದಿಂಬು ಹಾಗೂ ಬೇಡ್‌ಶೀಟ್‌ಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯೂ ನಡೆಯಿತು. ಜೈಲು ಅಧಿಕಾರಿಗಳಿಗೆ ಅಗತ್ಯವಾದ ಸೂಚನೆಗಳನ್ನು ನೀಡುವುದಾಗಿ ಕೋರ್ಟ್ ಭರವಸೆ ನೀಡಿತು ಮತ್ತು ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿತು.

ಇದನ್ನೂ ಓದಿ