Tuesday, September 9, 2025

2026 ರ ಟಿ20 ವಿಶ್ವಕಪ್​ಗೆ ಡೇಟ್ ಫಿಕ್ಸ್: ಭಾರತದಲ್ಲಿ ನಡೆಯುತ್ತಾ ಫೈನಲ್ ಮ್ಯಾಚ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026 ರಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ 2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದ್ದು, ಅದರ ಫೈನಲ್ ಪಂದ್ಯ ಮಾರ್ಚ್​ 8 ರಂದು ನಡೆಯಲಿದೆ.

ಈ ಬಗ್ಗೆ ಈ ವಿಶ್ವಕಪ್​ನಲ್ಲಿ ಭಾಗವಹಿಸುವ ಎಲ್ಲಾ 20 ತಂಡಗಳಿಗೂ ಐಸಿಸಿ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಆದಾಗ್ಯೂ ಈ ಬಗ್ಗೆ ಐಸಿಸಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

2026 ರ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿದೆ. 2026 ರ ಟಿ20 ವಿಶ್ವಕಪ್ ಫೆಬ್ರವರಿಯಲ್ಲಿ ಆರಂಭವಾಗಿ ಮಾರ್ಚ್​ನಲ್ಲಿ ಅಂತ್ಯವಾಗಲಿದೆ ಎಂದು ಈ ಮೊದಲೇ ವರದಿಯಾಗಿತ್ತು. ಅದರಂತೆ ಈಗ ಯಾವ ದಿನದಿಂದ ಶುರುವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, 2026 ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿದೆ. ಅಲ್ಲದೆ ಭಾರತದ ಐದು ಸ್ಥಳಗಳು ಮತ್ತು ಶ್ರೀಲಂಕಾದಲ್ಲಿ ಎರಡು ಸ್ಥಳಗಳು ಈ ವಿಶ್ವಕಪ್​ಗೆ ಆತಿಥ್ಯ ನೀಡಲಿವೆ. ಆದಾಗ್ಯೂ, ಯಾವ ಪಂದ್ಯವನ್ನು ಎಲ್ಲಿ ನಡೆಸಬೇಕೆಂದು ಇನ್ನೂ ನಿರ್ಧರಿಸಲಾಗಿಲ್ಲ. ಐಸಿಸಿ ಇನ್ನೂ ವೇಳಾಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ದೇಶಗಳಿಗೆ ಈ ಬಗ್ಗೆ ತಿಳಿಸಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಪಾಕಿಸ್ತಾನ ಫೈನಲ್ ತಲುಪುತ್ತದೆಯೋ ಇಲ್ಲವೋ ಎಂಬುದರ ಆಧಾರದ ಮೇಲೆ ಫೈನಲ್ ಅಹಮದಾಬಾದ್ ಅಥವಾ ಕೊಲಂಬೊದಲ್ಲಿ ನಡೆಯಲಿದೆ. ಪಾಕಿಸ್ತಾನ ಫೈನಲ್‌ಗೆ ಅರ್ಹತೆ ಪಡೆದರೆ, ಈ ಪಂದ್ಯವನ್ನು ಭಾರತದಲ್ಲಿ ಆಡಲಾಗುವುದಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ರಾಜಕೀಯ ಸಂಬಂಧಗಳಿಂದಾಗಿ, ಎರಡೂ ತಂಡಗಳು ಪರಸ್ಪರರ ದೇಶಗಳಲ್ಲಿ ಆಡುತ್ತಿಲ್ಲ. ಹೀಗಾಗಿ ಪಾಕಿಸ್ತಾನ ಫೈನಲ್​ಗೆ ಅರ್ಹತೆ ಪಡೆದರೆ, ಆ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ಒಂದು ವೇಳೆ ಪಾಕ್ ತಂಡ ಫೈನಲ್​ಗೆ ಬರದಿದ್ದರೆ, ಈ ಪಂದ್ಯ ಭಾರತದಲ್ಲಿ ನಡೆಯಲಿದೆ.

ಇಲ್ಲಿಯವರೆಗೆ, 15 ತಂಡಗಳು 2026 ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಮೆರಿಕ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ನೆದರ್ಲ್ಯಾಂಡ್ಸ್ ಮತ್ತು ಇಟಲಿ ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಉಳಿದ 5 ತಂಡಗಳಲ್ಲಿ, ಎರಡು ತಂಡಗಳು ಆಫ್ರಿಕಾ ಅರ್ಹತಾ ಸುತ್ತಿನಿಂದ ಮತ್ತು ಮೂರು ಏಷ್ಯಾ ಮತ್ತು ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಸುತ್ತಿನಿಂದ ಬರುತ್ತವೆ.

ಇದನ್ನೂ ಓದಿ