ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯಿಂದ ಹೊರಹಾಕಲಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ ಅಮೆರಿಕಕ್ಕೆ ಹೋದಾಗ ಕವಿತಾ ತನ್ನ ತಂದೆಗೆ ಬರೆದ ಪತ್ರ ಸೋರಿಕೆಯಾಗಿತ್ತು. ಕೆಸಿಆರ್‌ಗೆ ಬರೆದ ಪತ್ರದಲ್ಲಿ ಪಕ್ಷದೊಳಗಿನ ಆಂತರಿಕ ಸಮಸ್ಯೆಗಳ ಬಗ್ಗೆ ಸುಳಿವು ನೀಡಿದ ನಂತರ ಕವಿತಾ ಮತ್ತು ಬಿಆರ್‌ಎಸ್ ನಡುವಿನ ಬಿರುಕು ಬೆಳಕಿಗೆ ಬಂದಿತ್ತು. ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಈ ಪತ್ರ ಸೋರಿಕೆಯಾಗಿತ್ತು. ಅಲ್ಲಿಂದ ಹಿಂದಿರುಗಿದ ನಂತರ ಅವರು ಪಕ್ಷದಲ್ಲಿ ಕೆಲವು ಪಿತೂರಿಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ಕೆಸಿಆರ್ ದೇವರಂತೆ, ಆದರೆ ಕೆಲವು ದೆವ್ವಗಳು ಅವರನ್ನು ಸುತ್ತುವರೆದಿವೆ ಎಂದು ಟೀಕಿಸಿದ್ದರು.
ತನ್ನ ಸೋದರಸಂಬಂಧಿಗಳು ಮತ್ತು ಬಿಆರ್‌ಎಸ್ ನಾಯಕರಾದ ಟಿ. ಹರೀಶ್ ರಾವ್ ಮತ್ತು ಜೆ. ಸಂತೋಷ್ ಕುಮಾರ್ ಅವರು ತಮ್ಮ ತಂದೆ ಕೆಸಿಆರ್ ಅವರ ಪ್ರತಿಷ್ಠೆಯನ್ನು ಹಾಳು ಮಾಡಲು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ಮೌನ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಕವಿತಾ ಆರೋಪಿಸಿದ್ದರು. ಹೀಗೆ ಹೇಳಿದ ಬಳಿಕ ಇಂದು ಕೆ.ಕವಿತಾರನ್ನೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಪಕ್ಷದಿಂದ ಅಮಾನತು ಮಾಡಲಾಗಿದೆ.
‘ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರು ಕೆ. ಕವಿತಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪಕ್ಷದ ಎಂಎಲ್‌ಸಿ ಕೆ. ಕವಿತಾ ಅವರ ಇತ್ತೀಚಿನ ನಡವಳಿಕೆ ಮತ್ತು ನಡೆಯುತ್ತಿರುವ ಪಕ್ಷ ವಿರೋಧಿ ಚಟುವಟಿಕೆಗಳು ಪಕ್ಷಕ್ಕೆ ಹಾನಿ ಮಾಡುತ್ತಿವೆ. ಆದ್ದರಿಂದ ಪಕ್ಷದ ನಾಯಕತ್ವವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ’ ಎಂದು ಬಿಆರ್‌ಎಸ್ ಪೋಸ್ಟ್ ಮಾಡಿದೆ.