ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವಿದೆ. ಆದರೆ, ಬೆಂಗಳೂರಿನಲ್ಲಿ ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಮಗಳ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು, ಕಂಡಕ್ಟರ್ ಪ್ರಶ್ನಿಸಿದ್ದಕ್ಕೆ ಅವಾಜ್ ಹಾಕಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಬಸ್ಸಿನಲ್ಲಿ ಟಿಕೆಟ್ ಚೆಕ್ ಮಾಡುವಾಗ ಮಹಿಳೆಯೊಬ್ಬರು ಆಧಾರ್ ಕಾರ್ಡ್ ತೋರಿಸಿದ್ದಾರೆ. ಕಾರ್ಡ್ನಲ್ಲಿರುವ ಫೋಟೋ ಮತ್ತು ವಯಸ್ಸಿಗೂ (ಸುಮಾರು 20 ವರ್ಷ), ಎದುರಿಗಿದ್ದ ಮಹಿಳೆಗೂ ತಾಳೆಯಾಗದಿದ್ದಾಗ ಕಂಡಕ್ಟರ್ ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಮಹಿಳೆ, “ನಾನು ವಯಸ್ಸಾದವಳು, ಇದುವರೆಗೆ ನನ್ನನ್ನು ಯಾರೂ ಕೇಳಿಲ್ಲ, ನೀನ್ಯಾರು ಕೇಳೋಕೆ?” ಎಂದು ಕಂಡಕ್ಟರ್ ಜೊತೆ ಕಿರಿಕ್ ಮಾಡಿದ್ದಾರೆ.
ಅಷ್ಟಕ್ಕೇ ನಿಲ್ಲದ ಮಹಿಳೆ, “ಯೋಜನೆ ಜಾರಿಯಾದಾಗಿಂದ ನಾನು ಮಗಳ ಆಧಾರ್ ಕಾರ್ಡ್ ಬಳಸಿಯೇ ಓಡಾಡುತ್ತಿದ್ದೇನೆ. ಎಲ್ಲಿಯವರೆಗೆ ಫ್ರೀ ಇರುತ್ತದೋ ಅಲ್ಲಿಯವರೆಗೆ ನಾನು ಹೀಗೆಯೇ ಓಡಾಡುತ್ತೇನೆ” ಎಂದು ಉದ್ಧಟತನದ ಉತ್ತರ ನೀಡಿದ್ದಾರೆ. ಈ ಇಡೀ ಪ್ರಸಂಗವನ್ನು ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಸದ್ಯ ಇದು ಚರ್ಚೆಗೆ ಗ್ರಾಸವಾಗಿದೆ.



