March 31, 2026
Tuesday, March 31, 2026
spot_img

ಕಾಂಗ್ರೆಸ್ ಗೆ ತಲೆನೋವು ತಂದಿಟ್ಟ ‘ದಾವಣಗೆರೆ’: ಮಲ್ಲಿಕಾರ್ಜುನ್‌- ಜಮೀರ್ ನಡುವೆ ಟಿಕೆಟ್ ಗಾಗಿ ಮಾತಿನ ಸಮರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್‌ನ ಭದ್ರಕೋಟೆಯಾದ ದಾವಣಗೆರೆಯಲ್ಲಿ ಟಿಕೆಟ್ ಕಿಚ್ಚು ಹೊತ್ತಿಕೊಂಡಿದ್ದು, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಮೇಲೆ ಅಲ್ಪಸಂಖ್ಯಾತ ಸಮುದಾಯ ಕಣ್ಣಿಟ್ಟಿದೆ.

ಈ ವಿಚಾರವಾಗಿ ಸಚಿವ ಜಮೀರ್ ಅಹಮದ್ ಖಾನ್ ಹಾಗು ಶಾಮನೂರು ಕುಟುಂಬದ ಎಸ್.ಎಸ್. ಮಲ್ಲಿಕಾರ್ಜುನ ನಡುವೆ ಕದನ ತಾರಕ್ಕೇರಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಚಿವ ಜಮೀರ್ ಅಹ್ಮದ್ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ‘ಅವನ್ಯಾರು ಇಲ್ಲಿ ಬಂದು ಮಾತನಾಡೋಕೆ, ನಮ್ಮ ಕ್ಷೇತ್ರಗಳಿವು. ಇವೆಲ್ಲ ಸರಿ ಇರಲ್ಲ. ಇಲ್ಲಿ ಬಂದು ಮಾತನಾಡೋಕೆ ಅವನಿಗೆ ಅಧಿಕಾರ ಕೊಟ್ಟವರು ಯಾರು? ಪಕ್ಷದ ಸಭೆ ಕರೆದಾಗ ನಾನು ಈ ಬಗ್ಗೆ ಮಾತನಾಡುತ್ತೇನೆ, ಈಗ ಮಾತನಾಡಲ್ಲ’ ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ನಾನು ಟಿಕೆಟ್ ನೀಡಲು ಆಗುತ್ತಾ?, ಟಿಕೆಟ್ ನೀಡುವುದು ಹೈಕಮಾಂಡ್. ಆದರೆ ಅಲ್ಪಸಂಖ್ಯಾತರು ಮೊದಲ ಬಾರಿಗೆ ಇಲ್ಲಿ ಟಿಕೆಟ್ ಕೇಳುತ್ತಿಲ್ಲ. ಈ ಕ್ಷೇತ್ರದಲ್ಲಿ 80 ರಿಂದ 90 ಸಾವಿರ ಅಲ್ಪಸಂಖ್ಯಾತ ಮತದಾರರಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸ್ವತಃ ಶಾಮನೂರು ಶಿವಶಂಕರಪ್ಪ ಅವರೇ ಇದು ನನ್ನ ಕೊನೆಯ ಚುನಾವಣೆ, ಮುಂದಿನ ಬಾರಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ನಿಲ್ಲಿಸಿ ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮಾತು ಕೊಟ್ಟಿದ್ದರು’ ಎಂದು ಹೇಳಿದ್ದಾರೆ.

ಇದೇ ವೇಳೆ ನಮ್ಮ ಕ್ಷೇತ್ರದಲ್ಲಿ ಮಾತನಾಡಲು ಅವರು ಯಾರು?’ ಎಂಬ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್, ‘ನಮ್ಮ ಕ್ಷೇತ್ರ, ಅವರ ಕ್ಷೇತ್ರ ಎಂದು ಹೇಳಲು ಇಲ್ಲಿ ಯಾರೂ ಮಾಲೀಕರಲ್ಲ. ಚಾಮರಾಜಪೇಟೆ ನನ್ನ ಕ್ಷೇತ್ರ ಎಂದು ಹೇಳಿಕೊಳ್ಳಲು ನನಗೂ ಅಧಿಕಾರವಿಲ್ಲ. ರಾಜ್ಯದ 224 ಕ್ಷೇತ್ರಗಳೂ ಕಾಂಗ್ರೆಸ್ ಪಕ್ಷದ ಮತ್ತು ಹೈಕಮಾಂಡ್‌ನ ಕ್ಷೇತ್ರಗಳು. ನಾವೆಲ್ಲರೂ ಪಕ್ಷದ ಶಿಸ್ತಿನ ಸಿಪಾಯಿಗಳು. ನಾನು ಅಥವಾ ಮಲ್ಲಿಕಾರ್ಜುನ ಯಾರೂ ತೀರ್ಮಾನ ಮಾಡುವವರಲ್ಲ, ಅಂತಿಮ ನಿರ್ಧಾರ ಹೈಕಮಾಂಡ್ ಕೈಗೊಳ್ಳಲಿದೆ’ ಎಂದು ಟಾಂಗ್ ನೀಡಿದ್ದಾರೆ.

ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳುವ ನೀವು, ನಿಮ್ಮ ಕ್ಷೇತ್ರವಾದ ಚಾಮರಾಜಪೇಟೆಯಲ್ಲಿ ಬೇರೆಯವರಿಗೆ ಬಿಟ್ಟುಕೊಡುತ್ತೀರಾ?’ ಎಂಬ ಪ್ರಶ್ನೆಗೆ ಜಮೀರ್ ಅಚ್ಚರಿಯ ಉತ್ತರ ನೀಡಿದ್ದಾರೆ. ‘ಖಂಡಿತವಾಗಿಯೂ ಬಿಟ್ಟುಕೊಡುತ್ತೇನೆ. ಪಕ್ಷ ಅಥವಾ ಸಮುದಾಯದ ಹಿರಿಯರು ಹೇಳಿದರೆ ನಾನು ನನ್ನ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ’ ಎಂದು ಹೇಳುವ ಮೂಲಕ ಮಲ್ಲಿಕಾರ್ಜುನ ಅವರಿಗೆ ಪರೋಕ್ಷವಾಗಿ ಸವಾಲು ಎಸೆದಿದ್ದಾರೆ.

ಒಟ್ಟಿನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರ ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರು ಮತ್ತು ಪ್ರಭಾವಿ ಲಿಂಗಾಯತ ನಾಯಕರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !