ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾಖಲೆ ಬರೆಯುತ್ತಿರುವ ಸಿಎಂಗೆ ತುಂಬು ಹೃದಯದ ಶುಭ ಹಾರೈಕೆ. ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ದೀರ್ಘಾವಧಿ ಆಡಳಿತ ಮಾಡಿದ ದಾಖಲೆ ಬರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಇದು ಬಹಳ ಸಂತೋಷದ ವಿಷಯ. ನಮಗೆ, ನಿಮಗೆ ಎಲ್ಲರಿಗೂ ಸಂತೋಷದ ವಿಚಾರ. ನೀವು ಈ ಬಗ್ಗೆ ಉತ್ತಮವಾಗಿ ಪ್ರಚಾರ ಮಾಡಿ. ನಾನು ಅವರಿಗೆ ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ. ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳು ಇತಿಹಾಸದ ಪುಟಕ್ಕೆ ಹಿಂದೆಯೂ ಸೇರಿದ್ದಾರೆ, ಮುಂದೆಯೂ ಸೇರುತ್ತಾರೆ ಎಂದರು.
ಇದರಿಂದ ನಿಮ್ಮ ಹಾದಿ ಸುಗಮವಾಗುತ್ತದೆಯೇ ಎಂಬ ಪ್ರಶ್ನೆಗೆ, ಹಳ್ಳಿಯಿಂದ ಬಂದ ನಾನು ಇಲ್ಲಿಯವರೆಗೂ ತಲುಪಿದ್ದೇನೆ. ಇದಕ್ಕಿಂತ ಇನ್ನೇನು ಬೇಕು ನನಗೆ. ಯಾವುದನ್ನೂ ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ನನ್ನ ಬಾಯಲ್ಲಿ ಏನೇನೋ ಮಾತನಾಡಿಸಲು ಪ್ರಯತ್ನಿಸಬೇಡಿ ಎಂದರು.
ಶುಭ ದಿನಗಳು ಬರುತ್ತಿವೆ ಎಂಬ ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನಮಗೆ ಎಲ್ಲಾ ದಿನವೂ ಒಳ್ಳೆಯ ದಿನಗಳು, ನಿನ್ನೆ ಭೂತಕಾಲ, ನಾಳೆ ಭವಿಷ್ಯಕಾಲ, ಇಂದು ವರ್ತಮಾನ. ನಿಮ್ಮ ಜೊತೆ ಮಾತನಾಡುತ್ತಿರುವುದು ಒಳ್ಳೆಯ ದಿನ ಎಂದು ಚಟಾಕಿ ಹಾರಿಸಿದರು.

