ಹೊಸದಿಗಂತ ಡಿಜಿಟಲ್ ಡೆಸ್ಕ್:
26ನೇ ಆವೃತ್ತಿಯ ಬಸವನಗುಡಿ ಅವರೇಬೇಳೆ ಮೇಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.
ವಾಸವಿ ಕಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ಅವರು 2000ನೇ ಇಸವಿಯಲ್ಲಿ ಆರಂಭಿಸಿದ ಅವರೆಬೇಳೆ ಮೇಳ ಬೆಂಗಳೂರಿನ ಆಹಾರ, ಸಾಂಸ್ಕೃತಿಕ ಮತ್ತು ಪಾರಂಪರೆಯ ಪ್ರತೀಕವಾಗಿದೆ. ಈ ಬಾರಿ ಇನ್ನಷ್ಟು ವೈಭವದಿಂದ 4 ಜನವರಿ 2026ರ ವರೆಗೆ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇಬೇಳೆ ಮೇಳಕ್ಕೆ ಚಾಲನೆ ನೀಡಿದರು.
ಹಣ್ಣುಗಳ ರಾಜ ಮಾವು ಹೇಗೋ ಅದೇ ರೀತಿ ಕಾಳುಗಳ ರಾಜ ಅವರೆಕಾಳು. ವಿಶೇಷವಾಗಿ ಬೆಂಗಳೂರು ಸುತ್ತಮುತ್ತ ರಾಗಿ, ಜೋಳದ ಬೆಳೆ ಬೆಳೆಯುವಾಗ ಪಕ್ಕದಲ್ಲಿ ಅವರೇಕಾಳು ಸಾಮಾನ್ಯವಾಗಿ ಬೆಳೆಯುತ್ತಾರೆ. ಅವರೆಕಾಳು ನಮ್ಮೆಲ್ಲರ ನೆಚ್ಚಿನ ಖಾದ್ಯ. ವಾಸವಿ ಕಾಂಡಿಮೆಂಟ್ಸ್ ತಂಡದವರಿಂದ ಆಯೋಜನೆಯಾಗುತ್ತಿರುವ ಈ ಮೇಳದಿಂದ ನಮ್ಮ ಸಂಸ್ಕೃತಿ, ಇತಿಹಾಸವನ್ನ ಪಸರಿಸುವುದರ ಜೊತೆಗೆ ನಮ್ಮ ರೈತರಿಗೆ ವೇದಿಕೆ ಸಿಗಲಿ. ಬೆಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಅವರೇಬೇಳೆ ಮೇಳಕ್ಕೆ ಬರಲಿ ಎಂದು ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಒಜಿ ಅವರೆಬೇಳೆ ಮೇಳದ ಬಗ್ಗೆ ವಿಡಿಯೋಗಳು ವೈರಲ್ ಆಗಿವೆ. ಜನ ಫೋಟೊ, ವಿಡಿಯೋಗಳನ್ನು ಗಮನಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ.

