Tuesday, November 4, 2025

ಸತ್ಯ ಹೇಳಿದ ಸ್ನೇಹಿತನಿಗೆ ಸಾವು: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸಿದ ಕೊಲೆ ಕೇಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ಮನೆಯಲ್ಲೇ ತಾನೇ ಕಳ್ಳತನ ಮಾಡಿದ್ದ ರಹಸ್ಯವನ್ನು ತಾಯಿಯ ಬಳಿ ಮತ್ತು ಸ್ನೇಹಿತರ ಬಳಿ ಬಯಲು ಮಾಡಿದನೆಂಬ ಸಿಟ್ಟಿಗೆ, ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಆಪ್ತ ಗೆಳೆಯನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.

ಘಟನೆಯ ವಿವರ:

ಕೊಲೆಯಾದ ಯುವಕ ರಾಹುಲ್‌ ಮತ್ತು ಆರೋಪಿ ಪ್ರೀತಂ ಇಬ್ಬರೂ ಸ್ನೇಹಿತರು. ಕೃಷ್ಣಪ್ಪ ಲೇಔಟ್‌ನಲ್ಲಿ ವಾಸವಿರುವ ಪ್ರೀತಂ ಇಂಜಿನಿಯರಿಂಗ್ ಓದುತ್ತಿದ್ದರೆ, ರಾಹುಲ್ ಪಿಯುಸಿ ಡ್ರಾಪ್‌ಔಟ್ ಆಗಿದ್ದ. ಇಬ್ಬರೂ ಪ್ರತಿ ದಿನ ಒಟ್ಟಿಗೆ ಕಾಲ ಕಳೆಯುತ್ತಿದ್ದರು.

ಅಕ್ಟೋಬರ್ 25 ರಂದು ಪ್ರೀತಂ ಮನೆಯಲ್ಲಿ ಅವನ ತಾಯಿಯ ಚಿನ್ನದ ಒಡವೆಗಳು ಕಳ್ಳತನವಾಗಿದ್ದವು. ತನಿಖೆ ವೇಳೆ, ಪ್ರೀತಂ ತನ್ನ ಬ್ಯಾಗ್‌ನಲ್ಲಿ ಚಿನ್ನದ ಒಡವೆಗಳನ್ನು ಬಚ್ಚಿಟ್ಟಿದ್ದನ್ನು ರಾಹುಲ್‌ ನೋಡಿದ್ದಾನೆ. ಆತ ಈ ವಿಷಯವನ್ನು ನೇರವಾಗಿ ಪ್ರೀತಂನ ತಾಯಿಯ ಬಳಿ ಹೇಳಿ, ಕಳ್ಳತನದ ರಹಸ್ಯವನ್ನು ಬಯಲು ಮಾಡಿದ್ದಾನೆ.

ಇದರಿಂದ ತೀವ್ರವಾಗಿ ಸಿಟ್ಟಿಗೆದ್ದ ಪ್ರೀತಂ, ತನ್ನ ಮಾನ ಮತ್ತು ಮರ್ಯಾದೆಯನ್ನು ಸ್ನೇಹಿತ ಕೊಂದಿದ್ದಾನೆ ಎಂದು ತೀರ್ಮಾನಿಸಿ, ರಾಹುಲ್‌ನನ್ನು ಮಾತನಾಡಬೇಕೆಂದು ಕರೆಸಿಕೊಂಡಿದ್ದಾನೆ. ಇಬ್ಬರ ನಡುವೆ ದೊಡ್ಡ ಜಗಳ ನಡೆದು, ಕೋಪದ ಭರದಲ್ಲಿ ಪ್ರೀತಂ ಚಾಕುವಿನಿಂದ ರಾಹುಲ್‌ನನ್ನು ಇರಿದಿದ್ದಾನೆ.

ತೀವ್ರವಾಗಿ ಗಾಯಗೊಂಡ ರಾಹುಲ್‌ಗೆ ಜೊತೆಯಲ್ಲಿದ್ದ ಸ್ನೇಹಿತರು ತಕ್ಷಣ ಮಣಿಪಾಲ ಆಸ್ಪತ್ರೆಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಪ್ರೀತಂನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!