February 27, 2026
Friday, February 27, 2026
spot_img

ಸಾಲದ ಸುಳಿ, ಕ್ರೆಡಿಟ್ ಕಾರ್ಡ್ ವಂಚನೆ: ಒಂದೇ ಕುಟುಂಬದ ಮೂವರು ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್‌ಲೈನ್ ವಂಚನೆ ಮತ್ತು ಸೈಬರ್ ಕಾಲದ ಆರ್ಥಿಕ ದುರುಪಯೋಗಗಳು ಜೀವಕ್ಕೆ ಎಷ್ಟು ಅಪಾಯಕಾರಿ ಎಂಬುದಕ್ಕೆ ಸೂರತ್‌ನಲ್ಲಿ ನಡೆದ ಈ ಘೋರ ದುರಂತವೇ ಸಾಕ್ಷಿ. ಕ್ರೆಡಿಟ್ ಕಾರ್ಡ್ ವಂಚನೆ ಹಾಗೂ ಅದರಿಂದ ಎದುರಾದ ನಿರಂತರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಬಿಹಾರದವರಾದ ಸ್ಟಾಕ್ ಮಾರ್ಕೆಟ್ ವೃತ್ತಿಪರ ಬಲ್ಮುಕುಂದ್ ಖೇತಾನ್, ಅವರ ಪತ್ನಿ ಪ್ರಿಯಾಂಕಾ ಮತ್ತು ಹಿರಿಯ ಮಗಳು ಭವ್ಯಾ ಮೃತಪಟ್ಟ ದುರ್ದೈವಿಗಳು. ಇಡೀ ಕುಟುಂಬ ವಿಷಾಹಾರ ಸೇವಿಸಿ ಸಾವಿಗೆ ಶರಣಾಗಿದ್ದು, ಅದೃಷ್ಟವಶಾತ್ 7 ವರ್ಷದ ಕಿರಿಯ ಮಗಳು ಪೃಥ್ವಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಮೃತ ಬಲ್ಮುಕುಂದ್ ಅವರು ಹಿಂದಿಯಲ್ಲಿ ಬರೆದಿಟ್ಟಿರುವ ಮೂರು ಪುಟಗಳ ಡೆತ್‌ನೋಟ್‌ನಲ್ಲಿ ಸಾವಿನ ಹಿಂದಿನ ಕರಾಳ ರಹಸ್ಯ ಬಯಲಾಗಿದೆ. ವೈಭವ್ ರುಂಗ್ತಾ ಎಂಬಾತ ಬಲ್ಮುಕುಂದ್ ಅವರ ಕ್ರೆಡಿಟ್ ಕಾರ್ಡ್‌ಗಳನ್ನು ಕಾನೂನುಬಾಹಿರವಾಗಿ ದುರುಪಯೋಗಪಡಿಸಿಕೊಂಡಿದ್ದನು. ತನ್ನ ಹಣವನ್ನು ವಾಪಸ್ ಕೇಳಿದಾಗ, ವೈಭವ್ ಹಣ ನೀಡುವ ಬದಲು ಕುಟುಂಬಕ್ಕೆ ನಿರಂತರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕುತ್ತಿದ್ದನು ಎನ್ನಲಾಗಿದೆ. ಈ ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡ ತಾಳಲಾರದೆ ಕುಟುಂಬವು ಈ ನಿರ್ಧಾರಕ್ಕೆ ಬಂದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪುಟ್ಟ ಬಾಲಕಿ ಪೃಥ್ವಿ, ಪೋಷಕರು ತಮಗೆ ವಿಷಾಹಾರ ನೀಡಿದ್ದನ್ನು ಪೊಲೀಸರ ಮುಂದೆ ವಿವರಿಸಿದ್ದಾಳೆ. ವಿಷ ಸೇವಿಸಿದ ಬಳಿಕ ಪ್ರಿಯಾಂಕಾ ಅವರು ತನ್ನ ತಂದೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೂವರು ಸಾವನ್ನಪ್ಪಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು, ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ವೈಭವ್ ರುಂಗ್ತಾನನ್ನು ದೆಹಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !