Monday, December 8, 2025

ಡಿ.13-14: ದಿಲ್ಲಿಯಲ್ಲಿ ಬೃಹತ್ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ: ರಕ್ಷಣಾ ತಜ್ಞರಿಂದ ದೇಶದ ಭದ್ರತೆ ಕುರಿತು ಚರ್ಚೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಮತ್ತೊಮ್ಮೆ ಭದ್ರತೆ, ಸಂಸ್ಕೃತಿ ಮತ್ತು ಶೌರ್ಯದ ಜಾಗೃತಿ ಮೂಡಲು, ಭಾರತವು ವಿಶ್ವಕಲ್ಯಾಣಕಾರಿ ‘ಸನಾತನ ರಾಷ್ಟ್ರ’ ವಾಗಿ ಹೊರಹೊಮ್ಮುವುದು ಅತ್ಯಗತ್ಯ. ಇದೇ ಸಂದೇಶವನ್ನು ದೇಶಾದ್ಯಂತ ತಲುಪಿಸಲು, ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಪ್ರಸ್ತುತಪಡಿಸುತ್ತಿರುವ ಮತ್ತು ‘ಸನಾತನ ಸಂಸ್ಥೆ’ ಆಯೋಜಿಸುತ್ತಿರುವ ಬೃಹತ್ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಡಿಸೆಂಬರ್ 13 ಮತ್ತು 14 ರಂದು ದೆಹಲಿ (ಇಂದ್ರಪ್ರಸ್ಥ) ‘ಭಾರತ್ ಮಂಡಪಂ ‘ನಲ್ಲಿ ನಡೆಯಲಿದೆ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಅಭಯ್ ವರ್ತಕ್ ಅವರು ಮಾಹಿತಿ ನೀಡಿದರು.

ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ‘ಸೇವ್ ಕಲ್ಚರ್ ಸೇವ್ ಭಾರತ್’ನ ಅಧ್ಯಕ್ಷರು ಹಾಗೂ ಭಾರತದ ಮಾಜಿ ಮಾಹಿತಿ ಆಯುಕ್ತರಾದ ಉದಯ್ ಮಾಹೂರಕರ್, ಹಿಂದೂ ಜನಜಾಗೃತಿ ಸಮಿತಿಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ್ ರಾಜಹಂಸ, ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಮಿತಾ ಸಚದೇವ ಅವರು ಉಪಸ್ಥಿತರಿದ್ದರು.

ಸನಾತನ ಸಂಸ್ಥೆಯ ಅಭಯ್ ವರ್ತಕ್ ಅವರು ಮುಂದುವರಿದು ಮಾತನಾಡುತ್ತಾ, ‘ಆಪರೇಷನ್ ಸಿಂದೂರ್” ನಂತಹ ಧೈರ್ಯಶಾಲಿ ಕಾರ್ಯಾಚರಣೆಗಳಿಂದ ಹಿಡಿದು ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವವರೆಗೆ ಭಾರತವು ಪಯಣಿಸಿದೆ, ಆದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟಗಳು ಮತ್ತು ದೇಶದೊಳಗೆ ಸಣ್ಣ ‘ವೈಟ್ ಕಾಲರ್ ಭಯೋತ್ಪಾದಕ ಗುಂಪುಗಳನ್ನು’ ಸಕ್ರಿಯಗೊಳಿಸಿ ದಾಳಿಗೆ ಯೋಜಿಸಲಾಗುತ್ತಿದೆ ಎಂಬುದು ಬಹಿರಂಗಗೊಂಡಿದೆ. ಇದು ದೇಶದ ಆಂತರಿಕ ಭದ್ರತೆಗೆ ಗಂಭೀರ ಅಪಾಯ ತಂದೊಡ್ಡಿದೆ ಎಂಬುದು ಸ್ಪಷ್ಟವಾಗಿದೆ. ಮತ್ತೊಂದೆಡೆ, ವಿದೇಶಿ ವಿರೋಧಿ ಶಕ್ತಿಗಳು, ಡೀಪ್-ಸ್ಟೇಟ್, ನಕ್ಸಲಿಸಂ, ವಿಭಜಕ ಶಕ್ತಿಗಳು, ಒಳನುಸುಳುವಿಕೆ, ವೈಚಾರಿಕ ಯುದ್ಧ, ಲವ್ ಜಿಹಾದ್, ಹಲಾಲ್ ಜಿಹಾದ್ ಮುಂತಾದ ವಿವಿಧ ಕುತಂತ್ರಗಳ ಮೂಲಕ ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಬರೀ ತೋರಿಕೆಯ ಜಾತ್ಯತೀತತೆಗಿಂತ, ಭಾರತ ಭೂಮಿಯಲ್ಲಿ ಮತ್ತೊಮ್ಮೆ ಪ್ರಭು ಶ್ರೀರಾಮ, ಶ್ರೀಕೃಷ್ಣ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಕ್ಷಾತ್ರ ತೇಜಸ್ಸಿನ ಅಗತ್ಯವಿದೆ. ಹೀಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಸನಾತನ ಸಂಸ್ಥೆಯ ರಜತ ಮಹೋತ್ಸವದ ವರ್ಷ ಮತ್ತು ರಾಮರಾಜ್ಯಕ್ಕೆ ಸಮನಾದ ‘ಸನಾತನ ರಾಷ್ಟ್ರ’ ಸ್ಥಾಪನೆಗೆ ಕಾರ್ಯನಿರತರಾಗಿರುವ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನ್ಮೋತ್ಸವದ ನಿಮಿತ್ತ ಗೋವಾದಲ್ಲಿ ಮೊದಲ ‘ಶಂಖನಾದ ಮಹೋತ್ಸವ’ ನಡೆದಿತ್ತು. ಅದಕ್ಕೆ 23 ದೇಶಗಳಿಂದ 30 ಸಾವಿರಕ್ಕೂ ಹೆಚ್ಚು ಭಕ್ತರ ಅಭೂತಪೂರ್ವ ಹಾಜರಿ, ಅನೇಕ ಸಾಧು-ಸಂತರು, ಗೋವಾ ಮುಖ್ಯಮಂತ್ರಿಗಳು, ಕೇಂದ್ರ ಸಚಿವರ ಉಪಸ್ಥಿತಿ ಇದ್ದು, ಮಹೋತ್ಸವವು ಯಶಸ್ವಿಯಾಗಿ ನೆರವೇರಿತ್ತು. ಈಗ ದೆಹಲಿಯಲ್ಲಿ ನಡೆಯಲಿರುವ ಈ ಮಹೋತ್ಸವವು ರಾಷ್ಟ್ರ ಮತ್ತು ಸಂಸ್ಕೃತಿಯ ರಕ್ಷಣೆಯ ಶಂಖನಾದವಾಗಲಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ರಾಮರಾಜ್ಯಕ್ಕೆ ಸಮಾನವಾದ ಆದರ್ಶ ‘ಸನಾತನ ರಾಷ್ಟ್ರ’ ವನ್ನು ಸ್ಥಾಪಿಸುವ ಪವಿತ್ರ ಸಂಕಲ್ಪ ಮಾಡಿದ್ದಾರೆ. ಮಹಾಭಾರತ ಯುದ್ಧಕ್ಕೆ ಮುನ್ನ ಭಗವಾನ್ ಶ್ರೀಕೃಷ್ಣರು ಧರ್ಮಯುದ್ಧಕ್ಕೆ ಶಂಖನಾದ ಮೊಳಗಿಸಿದಂತೆ, ಈ ಮಹೋತ್ಸವವು ಧರ್ಮನಿಷ್ಠ ಸಮಾಜದಲ್ಲಿ ಆತ್ಮಶಕ್ತಿಯನ್ನು ಜಾಗೃತಗೊಳಿಸಿ, ಧರ್ಮಸೇವೆ ಮತ್ತು ರಾಷ್ಟ್ರಸೇವೆಗೆ ಪ್ರೇರಣೆ ನೀಡುವ ಶಂಖನಾದವಾಗಿದೆ.

ಎರಡು ದಿನಗಳ ಮಹೋತ್ಸವದಲ್ಲಿ ‘ಸನಾತನ ಸಂಸ್ಕೃತಿ ಸಂವಾದ’, ಸಾಂಸ್ಕೃತಿಕ-ಸಾಮಾಜಿಕ ವಿದ್ಯಮಾನಗಳು, ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ-ನಕ್ಸಲಿಸಂನ ಹಿನ್ನೆಲೆ, ರಕ್ಷಣಾ ನೀತಿ ಮತ್ತು ರಾಷ್ಟ್ರೀಯ ಬಲವನ್ನು ಸುದೃಢಗೊಳಿಸುವ ಕ್ರಮಗಳು ಈ ಪ್ರಮುಖ ವಿಷಯಗಳ ಬಗ್ಗೆ ವಿವಿಧ ಕ್ಷೇತ್ರಗಳ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಎರಡನೇ ದಿನ ‘ವಿಶ್ವಕಲ್ಯಾಣಕಾರಿ ಸನಾತನ ರಾಷ್ಟ್ರ’ ಎಂಬ ವಿಷಯದ ಕುರಿತು ವಿಶೇಷ ಅಧಿವೇಶನವನ್ನು ಆಯೋಜಿಸಲಾಗಿದೆ.

ದುರ್ಲಭ ಶಿವಾಜಿ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನ :
ದೆಹಲಿಯ ಬೃಹತ್ ‘ಭಾರತ್ ಮಂಟಪಮ್’ನ ಪ್ರದರ್ಶನ ಮಂದಿರ ಸಂಖ್ಯೆ ’12’ ರಲ್ಲಿ, ಡಿಸೆಂಬರ್ 13 ರಿಂದ 15, 2025 ರ ಮೂರು ದಿನಗಳ ಅವಧಿಯಲ್ಲಿ ವಿಶಿಷ್ಟವಾದ ‘ಶಿವಾಜಿ ಕಾಲದ ಶಸ್ತ್ರಾಸ್ತ್ರಗಳ ಪ್ರದರ್ಶನ’, ಹಾಗೂ ‘ಸನಾತನ ಸಂಸ್ಕೃತಿ, ರಾಷ್ಟ್ರ, ಕಲೆ, ಆಧ್ಯಾತ್ಮಿಕ ವಸ್ತುಗಳ’ ಬೃಹತ್ ಪ್ರದರ್ಶನವನ್ನು ಸಹ ಏರ್ಪಡಿಸಲಾಗುವುದು. ಈ ಪ್ರದರ್ಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಸುಮಾರು 250 ಕ್ಕೂ ಹೆಚ್ಚು ದುರ್ಲಭ ಮತ್ತು ಐತಿಹಾಸಿಕ ಶಸ್ತ್ರಾಸ್ತ್ರಗಳನ್ನು ದೆಹಲಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಪ್ರದರ್ಶನವನ್ನು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ವೀಕ್ಷಿಸಬಹುದಾಗಿದೆ. ಸಾಂಪ್ರದಾಯಿಕ ಮತ್ತು ಪ್ರಾಚೀನ ಯುದ್ಧಕಲೆಗಳ ರೋಮಾಂಚಕ ಪ್ರಾಯೋಗಿಕ ಪ್ರದರ್ಶನಗಳು ಸಹ ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿವೆ.

ಈ ಮಹೋತ್ಸವದಲ್ಲಿ ಅನೇಕ ಸಂತ-ಮಹಂತರು, ಗಣ್ಯರು, ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ವ್ಯಕ್ತಿಗಳು ಉಪಸ್ಥಿತರಿರಲಿದ್ದಾರೆ. ಅವರಲ್ಲಿ ಶ್ರೀರಾಮ ಜನ್ಮಭೂಮಿ ನ್ಯಾಸದ ಕೋಶಾಧ್ಯಕ್ಷರಾದ ಪ.ಪೂ. ಸ್ವಾಮಿ ಗೋವಿಂದದೇವಗಿರಿ ಮಹಾರಾಜರು, ಕರ್ನಾಟದ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ , ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್, ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಒಡೆಯರ್, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರಸಿಂಗ್ ಶೇಖಾವತ್, ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್, ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್, ದೆಹಲಿಯ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ, ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು ಮತ್ತು ಸಂಸದರಾದ ಛತ್ರಪತಿ ಉದಯನ್‌ರಾಜೇ ಭೋಸಲೆ, ಬಾಲಾಜಿ ದೇವಸ್ಥಾನದ ಪ.ಪೂ. ಡಾ. ನರೇಶಪುರಿಜಿ ಮಹಾರಾಜರು, ಹಾಗೂ ಸನಾತನ ಸಂಸ್ಥೆಯ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿದ್ದಾರೆ.

ಹಾಗೆಯೇ ಕಾಶಿ-ಮಥುರಾ ವಿಮೋಚನೆಗಾಗಿ ಹೋರಾಡುತ್ತಿರುವ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸುದರ್ಶನ್ ನ್ಯೂಸ್‌ನ ಪ್ರಧಾನ ಸಂಪಾದಕರಾದ ಶ್ರೀ. ಸುರೇಶ್ ಚವ್ಹಾಣಕೆ ಅವರೂ ಉಪಸ್ಥಿತರಿರಲಿದ್ದಾರೆ.

ಸಂತರುಗಳ ಆಧ್ಯಾತ್ಮಿಕ ಬಲ ಮತ್ತು ಈ ಗಣ್ಯರ ಸಾಮಾಜಿಕ ಹಾಗೂ ರಾಷ್ಟ್ರೀಯ ಕಾರ್ಯಗಳ ತ್ರಿವೇಣಿ ಸಂಗಮವೇ ಈ ಮಹೋತ್ಸವವಾಗಿದೆ.

ಈ ಮಹೋತ್ಸವದ ಕುರಿತು ಮಾಹಿತಿ ತಿಳಿದುಕೊಳ್ಳಲು, ಹಾಗೂ ಇದರಲ್ಲಿ ಭಾಗವಹಿಸಲು SanatanRashtraShankhnad.in ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು ಮತ್ತು ಕಾರ್ಯಕ್ರಮ ಸ್ಥಳಕ್ಕೆ ಬರುವಾಗ ತಮ್ಮೊಂದಿಗೆ ಸರ್ಕಾರಿ ಗುರುತಿನ ಚೀಟಿ (ID Card) ತರಬೇಕು ಎಂದು ಸನಾತನ ಸಂಸ್ಥೆಯಿಂದ ಮನವಿ ಮಾಡಲಾಗಿದೆ.

error: Content is protected !!