Saturday, October 11, 2025

ಭಾರತದ ಮೊದಲ ‘ಮಾನಸಿಕ ಆರೋಗ್ಯ ರಾಯಭಾರಿ’ಯಾದ ದೀಪಿಕಾ ಪಡುಕೋಣೆ

ಭಾರತೀಯ ಚಿತ್ರರಂಗದ ಖ್ಯಾತ ನಟಿ ಮತ್ತು ದಿ ಲೈವ್ ಲವ್ ಲಾಫ್ ಫೌಂಡೇಶನ್ (The Live Love Laugh Foundation) ಸಂಸ್ಥಾಪಕಿಯಾದ ದೀಪಿಕಾ ಪಡುಕೋಣೆ ಅವರನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾರತದ ಮೊದಲ “ಮಾನಸಿಕ ಆರೋಗ್ಯ ರಾಯಭಾರಿ”ಯಾಗಿ ನೇಮಿಸಿದೆ. ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ ಈ ಮಹತ್ವದ ಘೋಷಣೆಯನ್ನು ಮಾಡಲಾಗಿದ್ದು, ಮಾನಸಿಕ ಆರೋಗ್ಯದ ಕುರಿತು ದೇಶವ್ಯಾಪಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ದೀಪಿಕಾ ಪಡುಕೋಣೆ ಅವರು ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಗೆ ಭೇಟಿ ನೀಡಿ, ಮಾನಸಿಕ ಯೋಗಕ್ಷೇಮದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವ ವೀಡಿಯೊ ಹಂಚಿಕೊಂಡರು. ಅವರ ನೇಮಕದ ಬಗ್ಗೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ದೀಪಿಕಾ ಪಡುಕೋಣೆ ಅವರೊಂದಿಗಿನ ಈ ಪಾಲುದಾರಿಕೆ ಭಾರತದಲ್ಲಿ ಮಾನಸಿಕ ಆರೋಗ್ಯದ ಕುರಿತು ಮಾತನಾಡುವ ಭಯವನ್ನು ಕಡಿಮೆ ಮಾಡುತ್ತದೆ. ಇದು ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶವೆಂಬ ಅರಿವು ಮೂಡಿಸಲು ಸಹಾಯ ಮಾಡಲಿದೆ, ಎಂದರು.

ತಮ್ಮ ಪ್ರತಿಷ್ಠಾನದ ದಶಮಾನೋತ್ಸವದ ಸಂದರ್ಭದಲ್ಲಿ ದೀಪಿಕಾ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡು, ಮಾನಸಿಕ ಅಸ್ವಸ್ಥತೆಯಿಂದ ಪೀಡಿತರಾದವರಿಗೆ ಸಹಾಯ ಮಾಡಲು ದಿ ಲೈವ್ ಲವ್ ಲಾಫ್ ಹೇಗೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ವಿವರಿಸಿದರು. ಮಾನಸಿಕ ಆರೋಗ್ಯ ರಾಯಭಾರಿಯಾಗಿ ಸೇವೆ ಸಲ್ಲಿಸುವುದು ನನಗೆ ಹೆಮ್ಮೆಯ ವಿಷಯ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದೆ, ಎಂದು ಅವರು ಹೇಳಿದರು.

ದೀಪಿಕಾ ಮುಂದಿನ ದಿನಗಳಲ್ಲಿ ಟೆಲಿ ಮಾನಸ್ (Tele-MANAS) ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಮಾನಸಿಕ ಆರೋಗ್ಯ ಯೋಜನೆಗಳ ಪ್ರಚಾರದಲ್ಲಿ ಸಹ ಭಾಗವಹಿಸಲಿದ್ದಾರೆ. ದೇಶದಾದ್ಯಂತ ಮಾನಸಿಕ ಆರೋಗ್ಯ ಚೌಕಟ್ಟನ್ನು ಬಲಪಡಿಸುವ ಉದ್ದೇಶದಿಂದ ಸಚಿವಾಲಯದೊಂದಿಗೆ ಸಹಕರಿಸಲಿದ್ದಾರೆ.

error: Content is protected !!