March 11, 2026
Wednesday, March 11, 2026
spot_img

ಸ್ವೀಕರ್​ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು: ವಿರೋಧ ಪಕ್ಷಗಳ ನಡೆ ದೇಶದ ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ ಎಂದ ಅಮಿತ್ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಬುಧವಾರ ಧ್ವನಿ ಮತದ ಮೂಲಕ ಸೋಲಿಸಲಾಯಿತು.

ಇದಕ್ಕೂ ಮುನ್ನ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸ್ಪೀಕರ್ ಅವರ ಘನತೆಯನ್ನು ಅನುಮಾನಿಸುವ ಮೂಲಕ ವಿರೋಧ ಪಕ್ಷಗಳು ದೇಶದ ಪ್ರಜಾಪ್ರಭುತ್ವದ ಮೇಲೆ ಕಪ್ಪುಚುಕ್ಕೆ ತಂದಿವೆ ಎಡನು ವಾಗ್ದಾಳಿ ನಡೆಸಿದರು.

ಸ್ಪೀಕರ್ ಅವರ ಕೆಲವು ನಿರ್ಣಯಗಳನ್ನು ನಾವು ಒಪ್ಪದಿರಬಹುದು. ಹಾಗಂತ ಅವರನ್ನು ಅನುಮಾನಿಸಲು ಸಾಧ್ಯವಿಲ್ಲ. ಆದರೆ ಇಂದು ಸ್ಪೀಕರ್ ಅವರನ್ನು ಪದಚ್ಯುತಗೊಳಿಸಲು ಕೋರಿ ನಿರ್ಣಯ ಬಂದಿರುವುದು ಸಂಸದೀಯ ರಾಜಕೀಯಕ್ಕೆ ದುರದೃಷ್ಟಕರ ಕಾಲ. ನಾವು ನಮ್ಮ ಹಕ್ಕುಗಳ ಬಗ್ಗೆ ಮಾತನಾಡಬಹುದು, ಆದರೆ, ಯಾರೂ ಸದನದ ನಿಯಮಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಹೆಚ್ಚು ಅವಧಿಗೆ ವಿರೋಧ ಪಕ್ಷದಲ್ಲಿತ್ತು. ನಾವು ಆಗ ಒಮ್ಮೆಯೂ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ತಂದಿಲ್ಲ ಎಂದು ಶಾ ಕಾಂಗ್ರೆಸ್​ ನಡೆಯನ್ನು ಟೀಕಿಸಿದರು.

ಅಸಾಂವಿಧಾನಿಕ ಪದಗಳ ಬಳಕೆಯನ್ನು ನಿರ್ಬಂಧಿಸುವ ಮತ್ತು ಅವುಗಳನ್ನು ಕಡತ ಸೇರದಂತೆ ತಡೆಯುವ ಅಧಿಕಾರ ಸ್ಪೀಕರ್‌ಗೆ ನಿಯಮಗಳ ಅಡಿಯಲ್ಲಿ ನೀಡಲಾಗಿದೆ. ಆದರೆ, ಕಾಂಗ್ರೆಸ್​ ಮತ್ತು ಇತರ ವಿಪಕ್ಷಗಳು ಅಂತಹ ಪದಗಳನ್ನು ಉಳಿಸಿಕೊಳ್ಳಿ ಎಂದು ಹೇಳುವ ಮೂಲಕ ಎಲ್ಲ ಮಿತಿಗಳನ್ನು ದಾಟುತ್ತಿವೆ. ಲೋಕಸಭೆಯು ಸದನ ಸದಸ್ಯರು ಸ್ವತಃ ರೂಪಿಸಿದ ಸ್ಥಾಪಿತ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಪ್ರತಿಯೊಬ್ಬ ಸದಸ್ಯರು ಈ ನಿಯಮಗಳ ಪ್ರಕಾರ ಮಾತನಾಡುತ್ತಾರೆ. ಅವುಗಳನ್ನು ಧಿಕ್ಕರಿಸುವ ಹಕ್ಕು ಯಾರಿಗೂ ಇಲ್ಲ ಎಂದು ಅವರು ಹೇಳಿದರು.

ಈ ವೇಳೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ವಿರುದ್ಧ ಗುಡುಗಿದ ಗೃಹ ಸಚಿವರು, ಲೋಕಸಭೆಯ ಪ್ರತಿಪಕ್ಷದ ನಾಯಕರು ಸಂಸತ್ತಿನಲ್ಲಿ ನಡೆಯುವ ಯಾವುದೇ ಗಂಭೀರ ಚರ್ಚೆಗಳಲ್ಲಿ ಈವರೆಗೂ ಭಾಗವಹಿಸಿಲ್ಲ. 17 ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಹಾಜರಾತಿ 51% ರಷ್ಟಿದ್ದರೆ, ಸದನದ ಸರಾಸರಿ 66% ರಷ್ಟಿತ್ತು; 16 ನೇ ಲೋಕಸಭೆಯಲ್ಲಿ ಅವರ ಹಾಜರಾತಿ 52% ರಷ್ಟಿತ್ತು, ಆದರೆ ಸರಾಸರಿ 80% ರಷ್ಟಿತ್ತು ಎಂದರು.

ರಾಹುಲ್​ ಗಾಂಧಿಸದನಕ್ಕೆ ಬಂದರೂ ಕೆಲವೊಮ್ಮೆ ಕಣ್ಣು ಹೊಡೆಯುತ್ತಾರೆ. ಪ್ರಧಾನಿ ಕುರ್ಚಿ ಹತ್ತಿರ ಬಂದು ಅವರನ್ನು ತಬ್ಬಿಕೊಳ್ಳುತ್ತಾರೆ. ಒಬ್ಬ ಉತ್ತಮ ಸಂಸದೀಯ ಪಟುವಿಗೆ ಇರಬೇಕಾದ ಯಾವುದೇ ಗುಣಗಳನ್ನು ಇವರು ಹೊಂದಿಲ್ಲ. ಸಂಸತ್​ ನಿಯಮಗಳು ಗೊತ್ತಿಲ್ಲವಾದರೆ ಹಿರಿಯ ಸಂಸದರ ಸಲಹೆ ಪಡೆಯಿರಿ ಚಾಟಿ ಬೀಸಿದರು .

ಮಾತು ಮುಂದುವರಿಸಿದ ಅಮಿತ್​ ಶಾ, ಚರ್ಚೆಗಳ ವೇಳೆ ಮಹಿಳಾ ಸಂಸದರು ಪ್ರತಿಭಟನೆ ನಡೆಸುತ್ತಾ ಪ್ರಧಾನಿ ಆಸನದ ಬಳಿಗೆ ಬರುತ್ತಾರೆ. ಅಂತಹ ಕ್ರಮಗಳು ಸದನದಲ್ಲಿ ಸೂಕ್ತವಲ್ಲ. ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಿರೋಧ ಪಕ್ಷವು ನಿರ್ಣಯ ಮಂಡಿಸಲು ಸ್ವತಂತ್ರವಾಗಿವೆ. ಆದರೆ ಈ ಸದನವು ದೇಶದ ಕೋಟ್ಯಂತರ ಜನರ ಭವಿಷ್ಯವನ್ನು ನಿರ್ಧರಿಸುವ ಪವಿತ್ರ ಸ್ಥಳವಾಗಿದೆ. ಇಲ್ಲಿ ಕೆಲವರು ಗಂಭೀರ ಚರ್ಚೆ ಬಿಟ್ಟು ನಾಟಕೀಯ ವರ್ತನೆಗಳನ್ನು ಮಾಡುತ್ತಿದ್ದಾರೆ. ಇದು ಸಂಸತ್ತಿನ ಘನತೆಗೆ ತಕ್ಕುದಲ್ಲ ಎಂದು ಕುಟುಕಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !