ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆಯಲ್ಲಿ ಇಂದು (ಮೂರನೇ ದಿನ) ಮಹತ್ವದ ಬೆಳವಣಿಗೆಗಳು ನಡೆದಿವೆ. ಉನ್ನತ ತನಿಖಾ ಸಂಸ್ಥೆಗಳು ಸುಮಾರು 200 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಈ ನಡುವೆ, ಸ್ಫೋಟದ ಪ್ರಮುಖ ರುವಾರಿ ಉಗ್ರ ಡಾ. ಉಮರ್ ಮೊಹಮ್ಮದ್‌ಗೆ ಸೇರಿದ ಎರಡನೇ ಕಾರು ಫರಿದಾಬಾದ್‌ನ ಗ್ರಾಮವೊಂದರಲ್ಲಿ ಪತ್ತೆಯಾಗಿದೆ.
ಖಂಡವಾಲಿ ಗ್ರಾಮದಲ್ಲಿ ಕಾರು ವಶ
ದೆಹಲಿ ಪೊಲೀಸರ ಎಚ್ಚರಿಕೆಯ ಮೇರೆಗೆ ತಕ್ಷಣವೇ ಕಾರ್ಯಪ್ರವೃತ್ತರಾದ ಫರಿದಾಬಾದ್ ಪೊಲೀಸರು, ಖಂಡವಾಲಿ ಗ್ರಾಮದ ಬಳಿ ರೆಡ್ ಫೋರ್ಡ್ ಇಕೋ ಸ್ಪೋರ್ಟ್ ಕಾರನ್ನು (ನೋಂದಣಿ ಸಂಖ್ಯೆ: DL10CK0458) ವಶಕ್ಕೆ ಪಡೆದಿದ್ದಾರೆ. ಕಾರು ಪತ್ತೆಯಾದ ತಕ್ಷಣವೇ ದೆಹಲಿ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ, ಎಫ್‌ಎಸ್‌ಎಲ್ (FSL) ತಜ್ಞರು ಸ್ಥಳಕ್ಕೆ ಆಗಮಿಸಿ ಕಾರಿನ ತಪಾಸಣೆ ನಡೆಸಲು ಸೂಚಿಸಲಾಗಿದೆ.
ನಕಲಿ ವಿಳಾಸ ಬಳಸಿ ಕಾರು ಖರೀದಿ
ವಶಪಡಿಸಿಕೊಂಡಿರುವ ಈ ಕಾರನ್ನು ಉಗ್ರ ಉಮರ್ ಉನ್ ನಬಿ ಅಲಿಯಾಸ್ ಉಮರ್ ಮೊಹಮ್ಮದ್‌ನ ಹೆಸರಿನಲ್ಲೇ ಖರೀದಿಸಲಾಗಿತ್ತು. ಕಾರನ್ನು 2017ರ ನವೆಂಬರ್ 22ರಂದು ದೆಹಲಿಯ ರಾಜೌರಿ ಗಾರ್ಡನ್ ಆರ್‌ಟಿಓನಲ್ಲಿ ನೋಂದಾಯಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆದರೆ, ಕಾರು ಖರೀದಿಯ ವೇಳೆ ಡಾ. ಉಮರ್ ನಕಲಿ ವಿಳಾಸವನ್ನು ಬಳಸಿದ್ದಾನೆ. ದಾಖಲೆಗಳಲ್ಲಿ ಈಶಾನ್ಯ ದೆಹಲಿಯ ಒಂದು ಮನೆಯ ವಿಳಾಸವನ್ನು ನೀಡಿದ್ದಾನೆ. ನಿನ್ನೆ ತಡರಾತ್ರಿ ಪೊಲೀಸರು ಈ ವಿಳಾಸದ ಮೇಲೆ ದಾಳಿ ನಡೆಸಿದಾಗ, ಅಲ್ಲಿ ಯಾರೂ ಇರಲಿಲ್ಲ. ಈ ಮೂಲಕ ಉಗ್ರ ಕೃತ್ಯಕ್ಕಾಗಿ ನಕಲಿ ದಾಖಲೆಗಳನ್ನು ಬಳಸಿದ್ದು ದೃಢಪಟ್ಟಿದೆ.
ತನಿಖಾ ಸಂಸ್ಥೆಗಳಿಂದ ಶೋಧ
ಸದ್ಯ ಕಾರನ್ನು ಎಫ್‌ಎಸ್‌ಎಲ್ ಪರೀಕ್ಷೆಗಾಗಿ ಒಳಪಡಿಸಲಾಗಿದೆ. ಖಂಡವಾಲಿ ಗ್ರಾಮದಲ್ಲಿ ಈ ಕಾರನ್ನು ಯಾರು, ಯಾವಾಗ ಬಿಟ್ಟಿದ್ದಾರೆ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಆಳವಾದ ತನಿಖೆ ನಡೆಸುತ್ತಿವೆ. ಉಗ್ರನ ಪತ್ತೆಗಾಗಿ ಮತ್ತು ಸ್ಫೋಟದ ಹಿಂದಿನ ಸಂಪೂರ್ಣ ಜಾಲವನ್ನು ಭೇದಿಸಲು ತನಿಖೆಯು ಬಿರುಸುಗೊಂಡಿದೆ.

