ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸ್ಪೋಟ ಪ್ರಕರಣದಿಂದಾಗಿ ಮತ್ತೆ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಈ ದುಷ್ಕೃತ್ಯದಲ್ಲಿ, 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಪಾಕಿಸ್ತಾನ ನೋಟಮ್ (NOTAM (Notice to Airmen) ಜಾರಿ ಮಾಡಿದ್ದು, ಪಾಕಿಸ್ತಾನದಲ್ಲಿ ಹೈಅಲರ್ಟ್ ಘೋಷಣೆಯನ್ನು ಮಾಡಲಾಗಿದೆ.
ವಾಯುಪಡೆ ಮತ್ತು ನೌಕಾಪಡೆಗಳಿಗೆ ಸನ್ನದ್ದ ಸ್ಥಿತಿಯಲ್ಲಿ ಇರುವಂತೆ ಸೂಚಿಸಿದ್ದು, ವಾಯುಪಡೆಗೆ ರೆಡ್ ಹೈಅಲರ್ಟ್ ಇರುವಂತೆ ಪಾಕಿಸ್ತಾನ ಆದೇಶಿಸಿದೆ. ಬಿಗಿ ಭದ್ರತೆಯನ್ನು ಗಡಿಭಾಗದ ಪ್ರದೇಶಗಳಲ್ಲಿ ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನದ ಸೇನಾಪಡೆಗಳು, ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆ ಪ್ರದೇಶಗಳಿಗೆ ಹೈ ಅಲರ್ಟ್ ಘೋಷಿಸಲಾಗಿದ್ದು, ಪಾಕಿಸ್ತಾನದ ಸೆಂಟ್ರಲ್ ಕಮಾಂಡ್ ಎಲ್ಲ ಸೇನಾಪಡೆಗಳಿಗೆ “ಮುಂದೆ ನಡೆಯುವ ಬೆಳವಣಿಗೆಗಳಿಗೆ ಸಿದ್ಧರಾಗಿ” ಎಂಬ ಆದೇಶವನ್ನು ನೀಡಿದೆ.
ನವೆಂಬರ್ 11ರಿಂದ 12ರವರೆಗೆ NOTAM ಜಾರಿ ಇರಲಿದ್ದು, ವಾಯು ಸಂಚಾರದ ಮೇಲೆ ತಾತ್ಕಾಲಿಕ ನಿರ್ಬಂಧಗಳು ಮತ್ತು ಹೆಚ್ಚುವರಿ ಭದ್ರತಾ ಪ್ರೋಟೋಕಾಲ್‌ಗಳು ಚಾಲ್ತಿಯಲಿರಲಿದೆ. ಜೊತೆಗೆ ಪಾಕಿಸ್ತಾನದ ವಾಯು ರಕ್ಷಣಾ ಪಡೆಗಳು ಈಗ ಗಡಿಯ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿದ್ದು, ಭಾರತ–ಪಾಕಿಸ್ತಾನ ಗಡಿ ಪ್ರದೇಶದ ಮೇಲೆ ಕಣ್ಣಿಟ್ಟಿವೆ.
ಏನಿದು ನೋಟಮ್?
ನೋಟಮ್-NOTAM ಅಂದರೆ “ವಿಮಾನಚಾಲಕರಿಗೆ ಸೂಚನೆ” ಎಂದಾಗಿದೆ. ಇದು ವಿಮಾನಯಾನಕ್ಕೆ ಸಂಬಂಧಿಸಿದಂತೆ ವಾಯುಪ್ರದೇಶದ ಬಳಕೆಯಲ್ಲಿ ಆಗುವ ತಾತ್ಕಾಲಿಕ ಬದಲಾವಣೆಗಳು, ಅಪಾಯಗಳು ಅಥವಾ ನಿರ್ಬಂಧಗಳ ಕುರಿತು ನೀಡಲಾಗುವ ಅಧಿಕೃತ ಅಧಿಸೂಚನೆ ಆಗಿದ್ದು, ಈ ವೇಳೆ, ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ತಾತ್ಕಾಲಿಕ ಬದಲಾವಣೆಗಳು, ರನ್‌ವೇ ಮುಚ್ಚುವಿಕೆಗಳು, ಹೊಸ ನಿರ್ಬಂಧಿತ ವಾಯುಪ್ರದೇಶಗಳ ಜಾರಿ ಅಥವಾ ಇತರ ಪ್ರಮುಖ ಮಾಹಿತಿ ಕುರಿತು ಪೈಲಟ್‌ಗಳು ಮತ್ತು ವಾಯು ಸಂಚಾರ ನಿಯಂತ್ರಕರಿಗೆ ಮುಂಚಿತವಾಗಿ ಎಚ್ಚರಿಕೆ ನೀಡುವುದೇ ಈ ನೋಟಮ್‌ನ ಉದ್ದೇಶ. ಇದರ ಮೂಲಕ ವಿಮಾನಯಾನ ಕಾರ್ಯಾಚರಣೆಗಳ ಸುರಕ್ಷತೆ ಮತ್ತು ಸಮನ್ವಯತೆ ಖಚಿತವಾಗುತ್ತದೆ.ಈ ಸಂದರ್ಭದಲ್ಲಿ, ನೋಟಮ್‌ಗಳ ಮೂಲಕ ವಾಯು ವ್ಯಾಯಾಮಗಳ ಸಮಯದಲ್ಲಿ ಸಂಭವನೀಯ ವಾಯುಪ್ರದೇಶ ನಿರ್ಬಂಧಗಳು ಹಾಗೂ ಸಾಮಾನ್ಯ ಹಾರಾಟದ ಕಾರ್ಯವಿಧಾನಗಳಲ್ಲಿ ಬರುವ ಬದಲಾವಣೆಗಳನ್ನು ತಿಳಿಸಲಾಗಿದೆ.

