ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಕ್ರಾಮಿಕ ರೋಗದ ಸಮಯದಲ್ಲಿ COVID-19 ಔಷಧಿಗಳನ್ನು ಅಕ್ರಮವಾಗಿ ಸಂಗ್ರಹಿಸಿ ವಿತರಿಸಿದ ಆರೋಪದ ಮೇಲೆ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಹಾಗೂ ಅವರ ಪ್ರತಿಷ್ಠಾನ ಮತ್ತು ಇತರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
“ಕ್ರಿಮಿನಲ್ ದೂರು ರದ್ದುಗೊಂಡಿದೆ” ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತೀರ್ಪು ನೀಡಿದ್ದಾರೆ.
ಗಂಭೀರ್, ಪತ್ನಿ, ತಾಯಿ ಮತ್ತು ಪ್ರತಿಷ್ಠಾನದ ವಿರುದ್ಧ ವಿಚಾರಣಾ ನ್ಯಾಯಾಲಯ ಹೊರಡಿಸಿದ ಸಮನ್ಸ್ ಅನ್ನು ಪ್ರಶ್ನಿಸಿ ಮತ್ತು ಕ್ರಿಮಿನಲ್ ದೂರನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಮೇರೆಗೆ ಹೈಕೋರ್ಟ್ ಈ ಆದೇಶವನ್ನು ನೀಡಿದೆ.
ದೆಹಲಿ ಸರ್ಕಾರದ ಔಷಧ ನಿಯಂತ್ರಣ ಇಲಾಖೆಯು ಪೂರ್ವ ದೆಹಲಿಯ ಆಗಿನ ಸಂಸದರಾಗಿದ್ದ ಗೌತಮ್ ಗಂಭೀರ್, ಅವರ ಪ್ರತಿಷ್ಠಾನದ ಸಿಇಒ ಅಪರಾಜಿತಾ ಸಿಂಗ್, ತಾಯಿ ಮತ್ತು ಪತ್ನಿ ಸೀಮಾ ಗಂಭೀರ್ ಮತ್ತು ನತಾಶಾ ಗಂಭೀರ್ ಹಾಗೂ ಪ್ರತಿಷ್ಠಾನದ ಟ್ರಸ್ಟಿಗಳ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ಸೆಕ್ಷನ್ 18(ಸಿ) ಜೊತೆಗೆ ಸೆಕ್ಷನ್ 27(ಬಿ)(ii) ಅಡಿಯಲ್ಲಿ ದೂರು ದಾಖಲಿಸಿತ್ತು.

