January22, 2026
Thursday, January 22, 2026
spot_img

ಗಣರಾಜೋತ್ಸವಕ್ಕೆ ದೆಹಲಿ ಹೈಅಲರ್ಟ್: ಪೊಲೀಸರ ಕೈಸೇರಿತು AI ಸ್ಮಾರ್ಟ್ ಕನ್ನಡಕದ ಕಣ್ಗಾವಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

77ನೇ ಗಣರಾಜೋತ್ಸವದ ಹಿನ್ನೆಲೆಯಲ್ಲಿ ಜನವರಿ 26ರಂದು ನಡೆಯಲಿರುವ ಪರೇಡ್‌ಗೆ ಮುನ್ನ ದೆಹಲಿ ಪೊಲೀಸರು ಭದ್ರತೆಯನ್ನು ಗರಿಷ್ಠ ಮಟ್ಟಕ್ಕೆ ಏರಿಸಿದ್ದಾರೆ. ಈ ಬಾರಿ ಭದ್ರತಾ ವ್ಯವಸ್ಥೆಯಲ್ಲಿ ಎಐ ಸ್ಮಾರ್ಟ್ ಕನ್ನಡಕಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿವೆ.

ಗಣರಾಜೋತ್ಸವಕ್ಕೆ ಯಾವುದೇ ಭಯೋತ್ಪಾದಕ ಬೆದರಿಕೆ ಎದುರಾಗದಂತೆ ತಡೆಯುವ ಉದ್ದೇಶದಿಂದ, ದೆಹಲಿ ಪೊಲೀಸ್‌ ಇಲಾಖೆ ಬಹುಸ್ತರದ ಭದ್ರತಾ ವಲಯ ಜಾರಿಗೊಳಿಸಿದೆ. ಈ ನಡುವೆ ಮೊದಲ ಬಾರಿಗೆ ಬಿಡುಗಡೆ ಮಾಡಿರುವ ಅಲರ್ಟ್ ಪೋಸ್ಟರ್‌ಗಳಲ್ಲಿ ದೆಹಲಿಯ ಸ್ಥಳೀಯ ಭಯೋತ್ಪಾದಕನ ಚಿತ್ರವನ್ನು ಸೇರಿಸಲಾಗಿದೆ. ಮೊಹಮ್ಮದ್ ರೆಹಾನ್ ಎಂಬಾತ ಅಲ್-ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್ ಸಂಘಟನೆಗೆ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಭದ್ರತಾ ಕ್ರಮಗಳ ಪ್ರಮುಖ ಆಕರ್ಷಣೆಯಾಗಿ ಎಐ ಸ್ಮಾರ್ಟ್ ಕನ್ನಡಕಗಳನ್ನು ಪೊಲೀಸರಿಗೆ ಒದಗಿಸಲಾಗಿದೆ. ಈ ಕನ್ನಡಕಗಳ ಮೂಲಕ ಅಪರಾಧ ಹಿನ್ನೆಲೆಯ ವ್ಯಕ್ತಿಗಳು, ಶಂಕಿತರು ಹಾಗೂ ಕಳ್ಳತನಗೊಂಡ ವಾಹನಗಳು ಕಂಡುಬಂದ ಕ್ಷಣದಲ್ಲೇ ಪೊಲೀಸರಿಗೆ ತಕ್ಷಣ ಅಲರ್ಟ್ ಸಿಗಲಿದೆ. ಇದರ ಜೊತೆಗೆ ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಫೇಶಿಯಲ್ ರಿಕಗ್ನಿಷನ್ ತಂತ್ರಜ್ಞಾನಕ್ಕೆ ಸಂಪರ್ಕಿಸಲಾಗಿದೆ.

ಕರ್ತವ್ಯ ಪಥ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಪೊಲೀಸ್ ಹಾಗೂ ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್ ವಿರೋಧಿ ಘಟಕಗಳು, ಸ್ನೈಪರ್ ತಂಡಗಳು ಮತ್ತು ಕಠಿಣ ತಪಾಸಣಾ ಕ್ರಮಗಳು ಜಾರಿಯಲ್ಲಿರಲಿವೆ.

Must Read