ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವನೆಯಿಂದ 20ಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡ ಘಟನೆಗಳ ಬಳಿಕ ದೆಹಲಿ ಸರ್ಕಾರ ಈ ಕೆಮ್ಮಿನ ಸಿರಪ್ ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ. ದೆಹಲಿಯಲ್ಲಿಯೂ ಈ ಸಿರಪ್ ಖರೀದಿ ಮತ್ತು ಮಾರಾಟಕ್ಕೆ ಸಂಪೂರ್ಣ ತಡೆ ಹಾಕಲಾಗಿದೆ.
ಮಧ್ಯಪ್ರದೇಶದಲ್ಲಿ ನಡೆದ ತನಿಖೆಯಲ್ಲಿ, ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಗುಣಮಟ್ಟದ ದೃಷ್ಟಿಯಿಂದ ಕಳಪೆ ಎಂದು ಪತ್ತೆ ಹಚ್ಚಲಾಗಿದೆ. ಈ ಕಾರಣಕ್ಕಾಗಿ ದೆಹಲಿ ಸರ್ಕಾರ ಕೂಡ ತಕ್ಷಣ ಕಠಿಣ ಕ್ರಮ ಕೈಗೊಂಡಿದೆ. ಮಕ್ಕಳಿಗೆ ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ಪೋಷಕರು ಅವರನ್ನು ವೈದ್ಯರ ಬಳಿ ಕರೆದೊಯ್ದರು. ವೈದ್ಯರು ಕೋಲ್ಡ್ರಿಫ್ ಸಿರಪ್ ನೀಡಿದ ನಂತರ ಕೆಲ ಮಕ್ಕಳ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು, ಇದರಿಂದ 20 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ನವದೆಹಲಿ ಈಗಾಗಲೇ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಸಿರಪ್ ಶಿಫಾರಸು ಮಾಡದಂತೆ ಆದೇಶ ಹೊರಡಿಸಿತ್ತು. 2021 ರಲ್ಲಿ ಕೆಲವು ಮಕ್ಕಳು ಮೊಹಲ್ಲಾ ಚಿಕಿತ್ಸಾಲಯದಲ್ಲಿ ಈ ಸಿರಪ್ ಸೇವಿಸಿದ ಬಳಿಕ ಅನಾರೋಗ್ಯಕ್ಕೆ ಒಳಗಾದರೂ ಮೂವರು ಸಾವನ್ನಪ್ಪಿದ್ದರು. ನಂತರ ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (DGHS) ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿದ್ದು, ಈ ಸಿರಪ್ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.