ಹೊಸದಿಗಂತ ಡಿಜಿಟಲ್ ಡೆಸ್ಕ್:
2020ರ ದೆಹಲಿ ಸಾಮುದಾಯಿಕ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ತೀರ್ಪನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿದ ನಂತರ, ಉಚ್ಚ ನ್ಯಾಯಾಲಯ ಈ ನಿರ್ಧಾರ ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠ, ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಮಂಡಿಸಿದ ದಾಖಲೆಗಳು ಗಂಭೀರವಾಗಿವೆ ಎಂದು ಅಭಿಪ್ರಾಯಪಟ್ಟಿದೆ. ಖಾಲಿದ್ ಮತ್ತು ಇಮಾಮ್ ಇಬ್ಬರೂ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿರುವುದನ್ನು ಸೂಚಿಸುವ ಸಾಕಷ್ಟು ಪುರಾವೆಗಳು ದಾಖಲಾಗಿವೆ ಎಂದು ಕೋರ್ಟ್ ಹೇಳಿದೆ.
ವಿಚಾರಣೆಯ ವೇಳೆ, ದೆಹಲಿ ಪೊಲೀಸರ ಪರ ವಕೀಲರು ಶರ್ಜೀಲ್ ಇಮಾಮ್ ಭಾಷಣದ ಅಂಶಗಳನ್ನು ಕೋರ್ಟ್ ಗಮನಕ್ಕೆ ತಂದಿದ್ದು, ಸಿಲಿಗುರಿ ಕಾರಿಡಾರ್‌ನ್ನು ತಡೆದು ಅಸ್ಸಾಂನ ಸಂಪರ್ಕ ಕಡಿತಗೊಳಿಸುವಂತೆ ಕರೆ ನೀಡಿದ್ದ ಆರೋಪವನ್ನು ಉಲ್ಲೇಖಿಸಿದರು. ಈ ಹಿನ್ನೆಲೆಯಲ್ಲಿ, ಇದು ಕೇವಲ ಪ್ರತಿಭಟನೆ ಅಲ್ಲ, ದೇಶವನ್ನು ಅಸ್ಥಿರಗೊಳಿಸುವ ಸಂಚು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: Rice series 37 | ಪ್ರೋಟೀನ್ ಭರಿತ ಸೋಯಾ ಚಂಕ್ಸ್ ಪುಲಾವ್: ನೀವೂ ಟ್ರೈ ಮಾಡಿ
ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಮೊಹಮ್ಮದ್ ಸಮೀರ್ ಖಾನ್, ಶಾದಾಬ್ ಅಹ್ಮದ್ ಮತ್ತು ಶಿಫಾ ಉರ್ ರೆಹಮಾನ್ ಗೆ ಸುಪ್ರೀಂ ಕೋರ್ಟ್ 12 ಷರತ್ತುಗಳೊಂದಿಗೆ ಜಾಮೀನು ನೀಡಿದೆ.
ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (UAPA) ಅಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಐದು ವರ್ಷಕ್ಕಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. 2020ರ ಫೆಬ್ರವರಿ 23ರಿಂದ 29ರವರೆಗೆ ನಡೆದ ದೆಹಲಿ ಗಲಭೆಯಲ್ಲಿ 53 ಮಂದಿ ಮೃತಪಟ್ಟಿದ್ದು, ಈ ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.

