ಹೊಸದಿಗಂತ ಡಿಜಿಟಲ್ ಡೆಸ್ಕ್:
2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ರಿಮಿನಲ್ ಪಿತೂರಿಯಲ್ಲಿ ಇಬ್ಬರೂ ಪ್ರಮುಖ ಪಾತ್ರವಹಿಸಿದ್ದಾರೆ ಎಂಬ ಪ್ರಾಸಿಕ್ಯೂಷನ್ ವಾದಗಳು ಪ್ರಾಥಮಿಕ ಹಂತದಲ್ಲೇ ತೃಪ್ತಿಕರವಾಗಿವೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದ ಸೆಪ್ಟೆಂಬರ್ 2ರ ತೀರ್ಪು ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠ ಈ ಆದೇಶ ಪ್ರಕಟಿಸಿದೆ.
ಏಳು ಆರೋಪಿಗಳ ಪಾತ್ರ ಒಂದೇ ರೀತಿಯಲ್ಲಿಲ್ಲ ಎಂದು ಹೇಳಿದ ಕೋರ್ಟ್, ಪ್ರತಿಯೊಬ್ಬರ ಜಾಮೀನು ಅರ್ಜಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿದೆ. ಇತರ ಆರೋಪಿಗಳಿಗಿಂತ ಖಾಲಿದ್ ಮತ್ತು ಇಮಾಮ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ಪೀಠ ತಿಳಿಸಿದೆ. ಇದೇ ವೇಳೆ, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಮೊಹಮ್ಮದ್ ಸಮೀರ್ ಖಾನ್, ಶಾದಾಬ್ ಅಹ್ಮದ್ ಹಾಗೂ ಶಿಫಾ ಉರ್ ರೆಹಮಾನ್ ಅವರಿಗೆ 12 ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಲಾಗಿದೆ. ಷರತ್ತು ಉಲ್ಲಂಘನೆಯಾದರೆ ಜಾಮೀನು ರದ್ದಾಗಲಿದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Rice series 35 | ಆಲೂ ಫ್ರೈಡ್ ರೈಸ್: ಸಿಂಪಲ್ ಬ್ರೇಕ್ ಫಾಸ್ಟ್ ರೆಸಿಪಿ
ಖಾಲಿದ್ ಮತ್ತು ಇಮಾಮ್ ಅವರಿಗೆ ಒಂದು ವರ್ಷದ ನಂತರ ಪುನಃ ಜಾಮೀನು ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ನೀಡಲಾಗಿದೆ. ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ಸೂಚಿಸಿದ ಕೋರ್ಟ್, ಒಂದು ವರ್ಷದೊಳಗೆ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸುವಂತೆ ನಿರ್ದೇಶಿಸಿದೆ. ಯುಎಪಿಎ ಪ್ರಕರಣಗಳಲ್ಲಿ ಜಾಮೀನು ಅಪರೂಪವಾದರೂ, ನ್ಯಾಯಾಲಯದ ವಿವೇಚನಾ ಅಧಿಕಾರವನ್ನು ಕಾನೂನು ನಿರಾಕರಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
2020ರ ಫೆಬ್ರವರಿಯಲ್ಲಿ ಸಿಎಎ–ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ 53 ಮಂದಿ ಸಾವನ್ನಪ್ಪಿ, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಖಾಲಿದ್ ಮತ್ತು ಇಮಾಮ್ ವಿರುದ್ಧ ಯುಎಪಿಎ ಸೇರಿದಂತೆ ಗಂಭೀರ ಆರೋಪಗಳು ದಾಖಲಾಗಿವೆ.

