Tuesday, September 2, 2025

ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಲು ಒಕ್ಕೂಟ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಗೆ ದಿನಾಂಕ ನಿಗದಿಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಅಭಿವೃದ್ಧಿ ಅಧಿಕಾರಿ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಸತೀಶ್ ನಾಯ್ಕ ಲೋಕಾಯುಕ್ತ ಗಾಳಕ್ಕೆ ಸಿಕ್ಕಿಬಿದ್ದವರು. ಜಿಲ್ಲೆಯ ಹೊನ್ನಾಳಿ ತಾಲೂಕು ಚೀಲಾಪುರ ಗ್ರಾಮದ ದೇವರಾಜ್ ತಮ್ಮ ಸೋದರ ಮಾವ ಅಂಗಾನಾಯ್ಕ ಪರವಾಗಿ ದಾವಣಗೆರೆಯ ಸಹಕಾರ ಸಂಘಗಳ ಒಕ್ಕೂಟ ಕಛೇರಿಯಿಂದ ನಂದಿನಿ ಹಾಲು ಒಕ್ಕೂಟ ಸಹಕಾರ ಸಂಘದ ನೋಂದಣಿ ಪ್ರಮಾಣಪತ್ರ ಹಾಗೂ ಆದೇಶ ಪತ್ರ ಪಡೆದಿದ್ದರು. ಹಾಲು ಒಕ್ಕೂಟ ಸಹಕಾರ ಸಂಘದ ಆಡಳಿತ ಮಂಡಳಿ ರಚನೆಗೆ ಚುನಾವಣಾ ದಿನಾಂಕ ನಿಗಧಿಪಡಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಗೆ ಮನವಿ ಮಾಡಿದ್ದರು. ಈ ವೇಳೆ ಸತೀಶ್ ನಾಯ್ಕ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 3 ಸಾವಿರ ರೂ.ಗಳಿಗೆ ವ್ಯವಹಾರ ಕುದುರಿತ್ತು.

ದೇವರಾಜ್ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯಲ್ಲಿ 3 ಸಾವಿರ ರೂ. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಅಧಿಕಾರಿ ಸತೀಶ್ ನಾಯ್ಕರನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ