Monday, January 26, 2026
Monday, January 26, 2026
spot_img

ಕೈತುಂಬ ವರದಕ್ಷಿಣೆ ಕೊಟ್ಟರೂ ತೀರದ ಹಸಿವು: ಕಿರುಕುಳಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಬನಶಂಕರಿ ನಗರದಲ್ಲಿ ವರದಕ್ಷಿಣೆ ಕಿರುಕುಳದ ಕಿಚ್ಚಿಗೆ ನವವಿವಾಹಿತೆಯೊಬ್ಬರು ಬಲಿಯಾಗಿದ್ದಾರೆ. ಪತಿಯ ಮನೆಯವರ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಬೇಸತ್ತ ಕೀರ್ತಿ ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಕೀರ್ತಿ ಹಾಗೂ ಗುರುಪ್ರಸಾದ್ ಅವರ ವಿವಾಹ ಸಂಭ್ರಮದಿಂದ ನಡೆದಿತ್ತು. ಮಗಳ ಭವಿಷ್ಯ ಚೆನ್ನಾಗಿರಲಿ ಎಂದು ಪೋಷಕರು ಶಕ್ತಿಯುತವಾಗಿ ವರದಕ್ಷಿಣೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಸುಖವಾಗಿರಬೇಕಿದ್ದ ಸಂಸಾರದಲ್ಲಿ ಕಳೆದ ಎರಡು ತಿಂಗಳಿಂದ ಬಿರುಗಾಳಿ ಎದ್ದಿತ್ತು. ಗುರುಪ್ರಸಾದ್ ಹೆಚ್ಚುವರಿ ವರದಕ್ಷಿಣೆಗಾಗಿ ಕೀರ್ತಿಗೆ ಸತತ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

“ಕೀರ್ತಿ ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ತಾಯಿಯ ಬಳಿ ಹೇಳಿಕೊಂಡು ಕಣ್ಣೀರು ಹಾಕಿದ್ದಳು” ಎಂದು ಪೋಷಕರು ಆರೋಪಿಸಿದ್ದಾರೆ. ಭಾನುವಾರ ಬೆಳಿಗ್ಗೆ ಕೀರ್ತಿ ಆತ್ಮಹತ್ಯೆ ಮಾಡಿಕೊಂಡಾಗ, ಪತಿ ಗುರುಪ್ರಸಾದ್ ಪೋಷಕರಿಗೆ ದಾರಿ ತಪ್ಪಿಸುವ ಮಾಹಿತಿ ನೀಡಿದ್ದರು. “ನಿಮ್ಮ ಮಗಳಿಗೆ ತಲೆ ಸುತ್ತು ಬಂದು ಬಿದ್ದಿದ್ದಾಳೆ, ಆಸ್ಪತ್ರೆಗೆ ಸೇರಿಸಿದ್ದೇವೆ” ಎಂದು ಸುಳ್ಳು ಹೇಳಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸದ್ಯ ಕೀರ್ತಿ ಕುಟುಂಬದವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರದಕ್ಷಿಣೆ ಕಿರುಕುಳವೇ ಸಾವಿಗೆ ಕಾರಣ ಎಂದು ಪಟ್ಟು ಹಿಡಿದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Must Read