ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ 13ನೇ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ರೋಚಕ ಪೈಪೋಟಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 330 ರನ್ ಗಳಿಸಿದರೂ, ಆಸ್ಟ್ರೇಲಿಯಾ ಇನ್ನೊಂದು ಓವರ್ ಬಾಕಿಯಿರುವಂತೆಯೇ 3 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಈ ಸೋಲಿನಿಂದ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಾರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡವು ಶಕ್ತಿ ತುಂಬಿದ ಆರಂಭ ನೀಡಿತು. ಆರಂಭಿಕರಾದ ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂಧಾನ ಇಬ್ಬರು 155 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. ಸ್ಮೃತಿ 80 ರನ್ ಗಳಿಸಿ ಔಟಾದರೆ, ಪ್ರತಿಕಾ ರಾವಲ್ 75 ರನ್ ಗಳಿಸಿ ಪವಿಲಿಯನ್ ಸೇರಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 22 ರನ್‌ಗಳಿಗೂ ಸೀಮಿತಗೊಂಡರು.
ಹರ್ಲೀನ್ ಡಿಯೋಲ್ (38) ನಂತರ ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಭಾರತದ ಇನ್ನಿಂಗ್ಸ್‌ಗೆ ಸ್ಥೈರ್ಯ ನೀಡಲು ಪ್ರಯತ್ನಿಸಿದರು. ಇಬ್ಬರೂ ಐದನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ನೀಡಿದರು. ಆದರೆ ರಿಚಾ 32 ರನ್‌ಗಳಿಗೂ, ಜೆಮಿಮಾ 33 ರನ್‌ಗಳಿಗೂ ಔಟಾದರು. ಬಳಿಕ ಭಾರತೀಯ ಬ್ಯಾಟಿಂಗ್ ಕ್ರಮ ಕುಸಿದು ಕೇವಲ 50 ಓವರ್‌ಗಳಲ್ಲಿ ಆಲೌಟ್ ಆಯಿತು.
ಭಾರತ ನೀಡಿದ 331 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಆರಂಭಿಕ ಅಲಿಸಾ ಹೀಲಿ ಮತ್ತು ಫೋಬೆ ಲಿಚ್‌ಫೀಲ್ಡ್ ವೇಗವಾಗಿ ರನ್ ಕಲೆಹಾಕಿ 85 ರನ್‌ಗಳ ಆರಂಭ ನೀಡಿದರು. ನಾಯಕಿ ಹೀಲಿ ಕೇವಲ 84 ಎಸೆತಗಳಲ್ಲಿ ತಮ್ಮ ಆರನೇ ಏಕದಿನ ಶತಕ ಬಾರಿಸಿ ತಂಡದ ಗೆಲುವಿಗೆ ಭದ್ರ ನೆಲೆ ನಿರ್ಮಿಸಿದರು. ಆಶ್ಲೀ ಗಾರ್ಡ್ನರ್ ಜೊತೆ 95 ರನ್‌ಗಳ ಅಜೇಯ ಜೊತೆಯಾಟದಿಂದ ಆಸ್ಟ್ರೇಲಿಯಾ ಗೆಲುವು ಖಚಿತಪಡಿಸಿತು.
ಭಾರತದ ಬೌಲರ್‌ಗಳು ಆರಂಭದಲ್ಲಿ ಕೆಲವು ಸಾದರ ಫಲಿತಾಂಶ ನೀಡಿದರೂ, ಮಧ್ಯದ ಹಂತದಲ್ಲಿ ಒತ್ತಡ ಕಾಯ್ದುಕೊಳ್ಳಲು ವಿಫಲರಾದರು. ಸ್ಪಿನ್ನರ್‌ಗಳ ನಿರೀಕ್ಷಿತ ಪ್ರದರ್ಶನ ಮೂಡದೆ ಹೋದ ಕಾರಣ ಆಸ್ಟ್ರೇಲಿಯಾ ಸುಲಭವಾಗಿ ಗುರಿ ಮುಟ್ಟಿತು.