ಹೊಸದಿಗಂತ ಡಿಜಿಟಲ್ ಡೆಸ್ಕ್;
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಬಾಕಿ ಇದ್ದು, ಈಗಾಗಲೇ ಬೆಂಗಳೂರು ಸೇರಿದಂತೆ ಹಲೆವೆಡೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ.
ಆದರೆ ಸಿನಿಮಾದ ಸೆನ್ಸಾರ್ ಆಗುವುದು ಬಹಳ ತಡವಾಗಿದೆ. ಡಿಸೆಂಬರ್ 11 ರಂದು ಸಿನಿಮಾ ಬಿಡುಗಡೆ ಆಗಲಿಕ್ಕಿದೆ, ಆದರೆ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿರುವುದು ಡಿಸೆಂಬರ್ 10ರ ಮಧ್ಯಾಹ್ನ.
‘ಡೆವಿಲ್’ ಸಿನಿಮಾವನ್ನು ಸೆನ್ಸಾರ್ ಮಂಡಳಿಗೆ ಕಳಿಸಲು ಚಿತ್ರತಂಡ ತಡ ಮಾಡಿದೆ ಎನ್ನಲಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪೂರ್ಣ ಆಗದೇ ಇದ್ದ ಕಾರಣದಿಂದಾಗಿ ತಡವಾಗಿ ಸೆನ್ಸಾರ್ ಮಂಡಳಿಗೆ ಸಿನಿಮಾವನ್ನು ಕಳಿಸಲಾಗಿತ್ತು. ‘ಡೆವಿಲ್’ ಸಿನಿಮಾದ ಸೆನ್ಸಾರ್ ಆಗುವ ಮುಂಚೆಯೇ ಅಡ್ವಾನ್ಸ್ ಬುಕಿಂಗ್ ಸಹ ಆರಂಭಿಸಲಾಗಿತ್ತು. ಆದರೆ ಯಾವುದೇ ಮಲ್ಟಿಪ್ಲೆಕ್ಸ್ಗಳು ‘ಡೆವಿಲ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ತೆಗೆದುಕೊಂಡಿರಲಿಲ್ಲ, ಸೆನ್ಸಾರ್ ಆಗದೇ ಇದ್ದ ಕಾರಣದಿಂದಾಗಿ ಮಲ್ಟಿಪ್ಲೆಕ್ಸ್ಗಳು (ಪಿವಿಆರ್-ಐನಾಕ್ಸ್) ಅಡ್ವಾನ್ಸ್ ಬುಕಿಂಗ್ ತೆಗೆದುಕೊಳ್ಳದೆ ಕಾದು ನೋಡುವ ತಂತ್ರ ಅನುಸರಿಸಿವೆ. ಆದರೆ ಕೊನೆಗೂ ಇದೀಗ ‘ಡೆವಿಲ್’ ಸಿನಿಮಾದ ಸೆನ್ಸಾರ್ ಆಗಿದೆ.
‘ಡೆವಿಲ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣ ಪತ್ರವನ್ನು ನೀಡಿದೆ. 16 ವರ್ಷದ ಮೇಲಿನವರು ಸಿನಿಮಾ ನೋಡಬಹುದಾಗಿದೆ. 16 ವರ್ಷದವರು ಪೋಷಕರ ನಿಗಾವಣಿಯಲ್ಲಿ ‘ಡೆವಿಲ್’ ಸಿನಿಮಾ ನೋಡಬೇಕಿದೆ. ಇನ್ನು ‘ಡೆವಿಲ್’ ಸಿನಿಮಾದ ಒಟ್ಟು ರನ್ಟೈಂ ಅಂದರೆ ಒಟ್ಟು ಸಿನಿಮಾದ ಅವಧಿ 2 ಗಂಟೆ 49 ನಿಮಿಷಗಳು ಇದೆ. ಕೆಲ ಮೂಲಗಳ ಪ್ರಕಾರ ‘ಡೆವಿಲ್’ ಸಿನಿಮಾ ಈಗಾಗಲೇ ಯುಎಫ್ಓಗೆ ಅಪ್ಲೋಡ್ ಆಗಿದ್ದು, ಇದೀಗ ಅದಕ್ಕೆ ಪ್ರಮಾಣ ಪತ್ರವನ್ನು ಸಹ ಅಟ್ಯಾಚ್ ಮಾಡಲಾಗುತ್ತಿದೆ. ಆ ಮೂಲಕ ಸಿನಿಮಾ ಯಾವುದೇ ಅಡ್ಡಿ-ಆತಂಕ ಇಲ್ಲದೆ ನಾಳೆ (ಡಿಸೆಂಬರ್ 11) ಬಿಡುಗಡೆ ಆಗಲಿದೆ.

