ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ದೇವಸ್ಥಾನಂ ಜನವರಿ 9ರಿಂದ ಪ್ರಯೋಗಾತ್ಮಕವಾಗಿ ಶ್ರೀವಾಣಿ ಟ್ರಸ್ಟ್ ಟಿಕೆಟ್‌ಗಳಿಗಾಗಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಸಿದ್ಧವಾಗಿದೆ.
ಶ್ರೀವಣಿ ಟ್ರಸ್ಟ್‌ಗೆ 10,500 ರೂ. ಅಥವಾ ಅದಕ್ಕಿಂತ ಹೆಚ್ಚು ದೇಣಿಗೆ ನೀಡುವ ಭಕ್ತರಿಗೆ ಶ್ರೀವಾಣಿ ಟ್ರಸ್ಟ್ ಮೂಲಕ ನೀಡಲಾಗುವ ವಿಶೇಷ ವಿಐಪಿ ದರ್ಶನ ಟಿಕೆಟ್‌ಗಳು ಇವುಗಳಾಗಿದ್ದು, ಅದೇ ದಿನ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತ್ವರಿ ಮತ್ತು ಕಡಿಮೆ ಜನಸಂದಣಿಯೊಂದಿಗೆ ತಿಮ್ಮಪ್ಪನ ದರುಶನ ಪಡೆಯಲು ಅವಕಾಶ ಕಲ್ಪಿಸುತ್ತವೆ.
ಈಗ ತಿರುಮಲದ ಕೌಂಟರ್‌ಗಳಲ್ಲಿ ವಿತರಿಸಲಾಗುತ್ತಿರುವ 800 ಶ್ರೀವಾಣಿ ಟ್ರಸ್ಟ್ ಬ್ರೇಕ್ ದರುಶನ ಟಿಕೆಟ್‌ಗಳು ಇನ್ನು ಮುಂದೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡುವ ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತದೆ.
ಇದನ್ನೂ ಓದಿ: ಟಿವಿಯಲ್ಲಿ ಪ್ರಸಾರವಾಗಲಿದ್ಯಾ ಕಾಂತಾರ ಚಾಪ್ಟರ್ 1? ಸಂಕ್ರಾಂತಿ ಸ್ಪೆಷಲ್?
ಮೂರು ತಿಂಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗುವ 500 ಟಿಕೆಟ್‌ಗಳ ಆನ್‌ಲೈನ್ ಕೋಟಾಗೆ ಇವು ಹೆಚ್ಚುವರಿಯಾಗಿರುತ್ತವೆ. ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ಮಧ್ಯಾಹ್ನ 2 ಗಂಟೆಯವರೆಗೆ ಬುಕ್ಕಿಂಗ್‌ಗೆ ಅವಕಾಶವಿರುತ್ತದೆ. ಅದೇ ದಿನದ ದರ್ಶನಕ್ಕಾಗಿ ಭಕ್ತರು ಸಂಜೆ 4 ಗಂಟೆಗೆ ತಿರುಮಲದಲ್ಲಿ ಹಾಜರಿರಬೇಕಾಗುತ್ತದೆ ಎಂದು ಟಿಟಿಡಿ ಹೇಳಿದೆ.
ಒಂದು ತಿಂಗಳ ಪ್ರಯೋಗಾತ್ಮಕ ಅವಧಿಯ ಬಳಿಕ, ಒಟ್ಟಾರೆ ಶ್ರೀವಾಣಿ ದರುಶನ ಸಮಯಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ದರ್ಶನಕ್ಕಾಗಿ ದೀರ್ಘಕಾಲ ಕಾಯುವುದನ್ನು ತಪ್ಪಿಸಲು ಭಕ್ತರು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಟಿಟಿಡಿ ಮನವಿ ಮಾಡಿದೆ.

