Thursday, October 30, 2025

ಧರ್ಮಸ್ಥಳ ಶವ ಹೂತಿಟ್ಟ ಕೇಸ್: ಮೊದಲ ದಿನದ ಕಾರ್ಯಾಚರಣೆ ಅಂತ್ಯ, ರಿಸಲ್ಟ್??

ಹೊಸದಿಗಂತ ವರದಿ, ಮಂಗಳೂರು:

ಹೊಸದಿಗಂತ ವರದಿ, ಮಂಗಳೂರು:

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆಯ ಭಾಗವಾಗಿ ಮಂಗಳವಾರ ನಡೆದ ಪಾಯಿಂಟ್ 1. ಸಮಾಧಿ ಅಗೆಯುವ ಪ್ರಕ್ರಿಯೆ ಸಂಜೆಗೆ ಪೂರ್ಣಗೊಂಡಿದೆ.

ಈ ಕಾರ್ಯಾಚರಣೆಯಲ್ಲಿ ಯಾವುದೇ ಮಾನವ ದೇಹದ ಅವಶೇಷ ಸಿಕ್ಕಿಲ್ಲ.

ಅನಾಮಿಕ ದೂರುದಾರ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳ ತಂಡದಿಂದ ಆತ ತಿಳಿಸಿದ ಮೊದಲ ಸ್ಥಳದಲ್ಲಿ ದಿನವಿಡೀ ಅಗೆತ ನಡೆಸಿದ್ದರು.

ಆದರೆ ಯಾವುದೇ ರೀತಿಯ ಕುರುಹು ಪತ್ತೆಯಾಗಿಲ್ಲ. ಮಂಗಳವಾರ ನೇತ್ರಾವತಿ ಸ್ನಾನ ಘಟ್ಟದಲ್ಲಿ ಗುರುತಿಸಲಾದ ಸ್ಥಳದಲ್ಲಿ ಪುತ್ತೂರು ಎ.ಸಿ. ಸಮ್ಮುಖದಲ್ಲಿ ದೂರುದಾರರ ಉಪಸ್ಥಿತಿಯಲ್ಲಿ ಅಧಿಕಾರಿಗಳ ತಂಡ ಬಿಗಿ ಬಂದೋಬಸ್ತ್ ನಲ್ಲಿ ಸುರಿಯುತ್ತಿರುವ ಮಳೆಯೊಂದಿಗೆ ಸುಮಾರು 6 ತಾಸಿಗಿಂತಲೂ ಅಧಿಕಕಾಲ ಅಗೆಯುವ ಕಾರ್ಯ ನಡೆಸಿತು. ಮೊದಲ ಹಂತದಲ್ಲಿ ಸ್ಥಳೀಯ 12 ಪೌರಕಾರ್ಮಿಕರ ಸಹಕಾರದಲ್ಲಿ ಅಗೆಯುವ ಕಾರ್ಯ ಆರಂಭವಾಯಿತು. ಸತತ ಮೂರು ಗಂಟೆ ಕೆಲಸ ನಡೆಸಿ ಸುಮಾರು 4 ಅಡಿ ಆಳ, 6 ಅಡಿ ಉದ್ದದ ಹೊಂಡ ತೋಡಿದರು ಯಾವುದೇ ಕುರುಹು ಪತ್ತೆಯಾಗಲಿಲ್ಲ.

ಬಳಿಕ ತನಿಖಾಧಿಕಾರಿ ಅನುಚೇತ್ ಅವರ ನಿರ್ದೇಶನದ ಮೇರೆಗೆ ಸಂಜೆ ಗಂಟೆ 3:20 ರಿಂದ 6 ಗಂಟೆ ತನಕ ಮಿನಿ ಹಿಟಾಚಿ ಬಳಸಿ ಅದೇ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿಸಲಾಯಿತು. 15 ಅಡಿ ಅಗಲ 8 ಅಡಿ ಆಳದ ಹೊಂಡ ತೋಡಿದರೂ ಯಾವುದೇ ರೀತಿಯ ಕುರುಹುಗಳು ಕಂಡುಬಂದಿಲ್ಲ. ಸಂಜೆ 5ರ ಗಂಟೆ ಹೊತ್ತಿಗೆ ಶ್ವಾನ ದಳವನ್ನು ಕರೆಸಲಾಯಿತು. ಕತ್ತಲು ಆವರಿಸಲು ಆರಂಭವಾದ ಕಾರಣ ಸಂಜೆ 6ರ ಹೊತ್ತಿಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ನಾಳೆ ಮತ್ತೆ ಅನಾಮಿಕ ಹೇಳಿರುವ ಎರಡನೇ ಪಾಯಿಂಟ್ ನಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಲಾಗಿದೆ.

error: Content is protected !!