ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಬಹುನಿರೀಕ್ಷಿತ ಆ್ಯಕ್ಷನ್ ಧಮಾಕಾ ‘ಧುರಂಧರ್ 2’ ದೇಶಾದ್ಯಂತ ಸದ್ದು ಮಾಡುತ್ತಿದೆ. ಮಾರ್ಚ್ 18ರ ಸಂಜೆಯಿಂದಲೇ ಸಿನಿಮಾ ಪ್ರದರ್ಶನ ಕಂಡಿದ್ದರೂ, ಕನ್ನಡದ ಪ್ರೇಕ್ಷಕರಿಗೆ ಮಾತ್ರ ಸ್ವಲ್ಪ ನಿರಾಸೆಯಾಗಿತ್ತು. ತಾಂತ್ರಿಕ ಕಾರಣಗಳಿಂದಾಗಿ ಕನ್ನಡ ಆವೃತ್ತಿಯ ಬಿಡುಗಡೆ ತಡವಾಗಿತ್ತು. ಆದರೆ ಈಗ ಎಲ್ಲಾ ವಿಘ್ನಗಳು ದೂರವಾಗಿದ್ದು, ಕರುನಾಡಿನಾದ್ಯಂತ ‘ಧುರಂಧರ್’ ಅಬ್ಬರ ಶುರುವಾಗಿದೆ.
ಮಾರ್ಚ್ 19ರಂದು ಹಿಂದಿ ಆವೃತ್ತಿ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿತು. ಆದರೆ ದಕ್ಷಿಣ ಭಾರತದ ಭಾಷೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಕನ್ನಡದಲ್ಲಿ ಬಿಡುಗಡೆ ವಿಳಂಬವಾಗಲು ಸೆನ್ಸಾರ್ ಪ್ರಮಾಣಪತ್ರ ಸಿಗುವುದು ತಡವಾಗಿದ್ದು ಮತ್ತು DCP (ಡಿಜಿಟಲ್ ಕಂಟೆಂಟ್) ಚಿತ್ರಮಂದಿರಗಳಿಗೆ ಸಕಾಲಕ್ಕೆ ತಲುಪದೇ ಇರುವುದು ಮುಖ್ಯ ಕಾರಣ ಎನ್ನಲಾಗಿದೆ.
ಈ ಬೆಳವಣಿಗೆಯಿಂದ ಬೇಸರಗೊಂಡಿದ್ದ ಅಭಿಮಾನಿಗಳಿಗೆ ನಿರ್ದೇಶಕ ಆದಿತ್ಯ ಧರ್ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದರು. “ಎಲ್ಲಾ ಭಾಷೆಗಳಲ್ಲೂ ಒಟ್ಟಿಗೆ ಬರಬೇಕೆಂಬ ಆಸೆ ಇತ್ತು, ಆದರೆ ಅನಿವಾರ್ಯ ಕಾರಣಗಳಿಂದ ತಡವಾಗಿದೆ” ಎಂದು ಅವರು ಸ್ಪಷ್ಟನೆ ನೀಡಿದ್ದರು.
ವಿಳಂಬದ ನಂತರ ತೆರೆಕಂಡರೂ ಸಹ ಕರ್ನಾಟಕದ ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕನ್ನಡ ಆವೃತ್ತಿಗೆ ಹೌಸ್ಫುಲ್ ಪ್ರದರ್ಶನಗಳು ಸಿಗುತ್ತಿವೆ. ರಣವೀರ್ ಸಿಂಗ್ ಅವರ ಆ್ಯಕ್ಷನ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಚಿತ್ರವು ಕೇವಲ 4 ದಿನಗಳಲ್ಲಿ ವಿಶ್ವದಾದ್ಯಂತ 600 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ.



