Tuesday, December 30, 2025

ಬ್ಲ್ಯಾಕ್‌ಮೇಲ್‌ಗೆ ಬಲಿಯಾಯಿತೇ ಎರಡು ಜೀವ? ತಾಯಿ-ಮಗನ ಆತ್ಮಹತ್ಯೆ ಕೇಸ್‌ಗೆ ಸ್ಫೋಟಕ ತಿರುವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ತಾಯಿ ಮತ್ತು ಮಗ ಶವವಾಗಿ ಪತ್ತೆಯಾದ ಪ್ರಕರಣವು ಈಗ ಹೊಸ ಆಯಾಮ ಪಡೆದುಕೊಂಡಿದೆ. ಆರಂಭದಲ್ಲಿ ಇದೊಂದು ಸಾಧಾರಣ ಆತ್ಮಹತ್ಯೆ ಎಂದು ಭಾವಿಸಲಾಗಿತ್ತಾದರೂ, ತನಿಖೆಯ ವೇಳೆ ಲಭ್ಯವಾಗಿರುವ ಮಾಹಿತಿಗಳು ಆಘಾತಕಾರಿಯಾಗಿವೆ. ಬ್ಲ್ಯಾಕ್‌ಮೇಲ್ ಮತ್ತು ಮಾನಸಿಕ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂಬ ಸ್ಫೋಟಕ ಸತ್ಯ ಬಯಲಾಗಿದೆ.

ಮೃತ ಮಹಿಳೆಯನ್ನು 32 ವರ್ಷದ ಹಂಸಲೇಖ ಮತ್ತು ಆಕೆಯ 8 ವರ್ಷದ ಪುತ್ರ ಗುರುಪ್ರಸಾದ್ ಎಂದು ಗುರುತಿಸಲಾಗಿದೆ. ಹಂಸಲೇಖ ಮೂಲತಃ ಭೂಪಸಂದ್ರ ಗ್ರಾಮದವರಾಗಿದ್ದು, ಅವರ ಮೊದಲ ಪತಿ ನಾಗೇಶ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ ಕುಟುಂಬದವರ ಸಮ್ಮತಿಯೊಂದಿಗೆ ನಾಗೇಶ್ ಅವರ ಸಹೋದರ ಲೋಕೇಶ್ ಎಂಬುವವರನ್ನು ಮರುಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು.

ಮೂಲಗಳ ಪ್ರಕಾರ, ಹಂಸಲೇಖ ಅವರು ಮಲ್ಲಿಕಾರ್ಜುನ ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಈ ಸ್ನೇಹದ ನಡುವೆ ನಡೆದಿದ್ದ ದೂರವಾಣಿ ಸಂಭಾಷಣೆ ಮತ್ತು ಕೆಲವು ವಿಡಿಯೋಗಳನ್ನು ಮುಂದಿಟ್ಟುಕೊಂಡು ಮಲ್ಲಿಕಾರ್ಜುನ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಆತ ಹಂಸಲೇಖಗೆ ಬೆದರಿಕೆ ಹಾಕುತ್ತಿದ್ದರಿಂದ ತೀವ್ರವಾಗಿ ಭಯಗೊಂಡಿದ್ದ ಅವರು, ಕಳೆದ ಶುಕ್ರವಾರ ಮಗನೊಂದಿಗೆ ಮನೆಯಿಂದ ಹೊರಬಂದು ಸ್ನೇಹಿತೆಯೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದರು.

ಸಮಾಜದಲ್ಲಿ ಮರ್ಯಾದೆ ಹೋಗಬಹುದು ಎಂಬ ಆತಂಕ ಹಾಗೂ ಮಲ್ಲಿಕಾರ್ಜುನನ ಪೀಡೆಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲದೆ, ಶನಿವಾರ ಬೆಳಿಗ್ಗೆ ಹಂಸಲೇಖ ಅವರು ತಮ್ಮ ಪುಟ್ಟ ಮಗನೊಂದಿಗೆ ಕಳ್ಳಂಬೆಳ್ಳ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಕಳ್ಳಂಬೆಳ್ಳ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಬ್ಲ್ಯಾಕ್‌ಮೇಲ್ ಮಾಡಿದ್ದಾನೆನ್ನಲಾದ ಆರೋಪಿ ಮಲ್ಲಿಕಾರ್ಜುನನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

error: Content is protected !!