February 4, 2026
Wednesday, February 4, 2026
spot_img

ಅಕ್ರಮ ವಲಸಿಗರನ್ನು ತೋರಿಸಿದ್ರು ಕೇಸ್ ಹಾಕ್ತಿರಾ? ಪುನೀತ್ ಕೆರೆಹಳ್ಳಿ ಪ್ರಕರಣಕ್ಕೆ ತಡೆ ನೀಡಿದ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಬಾಂಗ್ಲಾ ವಲಸಿಗರ ವಿಚಾರವಾಗಿ ಪುನೀತ್ ಕೆರೆಹಳ್ಳಿ ವಿರುದ್ಧದ ಎರಡೆರಡು ಕೇಸ್​ ಗಳಲ್ಲಿ ಒಂದು ಪ್ರಕರಣಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ತಡೆ ನೀಡಿದ್ದು, ಮತ್ತೊಂದು ಪ್ರಕರಣದಲ್ಲಿ ಬಲವಂತದ ಕ್ರಮಕೈಗೊಳ್ಳದಂತೆ ಆದೇಶ ಹೊರಡಿಸಿದೆ.

ಹೈಕೋರ್ಟ್ ಏಕಸದಸ್ಯ ಪೀಠ ಇಂದು ಪ್ರಕರಣದ ವಿಚಾರಣೆ ಮಾಡಿದ್ದು, ಎಲ್ಲೆಡೆ ಅಕ್ರಮ ವಲಸಿಗರು ಬಂದು ಸೇರಿದ್ದಾರೆ. ಅಕ್ರಮ ವಲಸಿಗರಿದ್ದಾರೆಂದು ತೋರಿಸಿದರೂ ಕೇಸ್ ಹಾಕುತ್ತೀರಿ ಎಂದು ಪೊಲೀಸರನ್ನ ತರಾಟೆ ತೆಗೆದುಕೊಂಡಿದೆ. ಜೊತೆಗೆ ವಲಸಿಗರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ ತಿಳಿಸಿ ಎಂದು ಸರ್ಕಾರವನ್ನ ಪ್ರಶ್ನಿಸಿದೆ.

ಸರ್ಕಾರದ ಪ್ರತಿಕ್ರಿಯೆಗಾಗಿ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಬಿಂಗೀಪುರ ಗ್ರಾಮದಲ್ಲಿ ಶಂಕಿತ ಬಾಂಗ್ಲಾ ವಲಸಿಗರು ಇರುವ ಜಾಗಕ್ಕೆ ಪುನೀತ್ ಕೆರೆಹಳ್ಳಿ ತಂಡ ತೆರಳಿದ್ದರು. ಅಲ್ಲಿದ್ದ ವಲಸೆ ಕಾರ್ಮಿಕರ ದಾಖಲೆಗಳನ್ನ ಪರಿಶೀಲನೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದರು. ಇದಾದ ಬಳಿಕ ಜಾಗದ ಮಾಲೀಕ ಸಿದ್ದೇಶ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಸೇತಿದಂತೆ ಇತರರ ವಿರುದ್ಧ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.

ಪ್ರಕರಣ ದಾಖಲು ಮಾಡಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು ತಡರಾತ್ರಿ ಪುನೀತ್ ಕೆರೆಹಳ್ಳಿಯನ್ನ ಬಂಧಿಸಿದ್ದರು. ಆ ಬೆನ್ನಲ್ಲೇ ಷರತ್ತುಬದ್ಧ ಜಾಮೀನು ಪಡೆದಿದ್ದರು. ಸದ್ಯ ಇದೇ ಪ್ರಕರಣಕ್ಕೆ ತಡೆ ನೀಡಲಾಗಿದೆ.

ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ
ಇನ್ನು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದಾಗ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಏಕಸದಸ್ಯ ಪೀಠ ಸೂಚನೆ ನೀಡಿ ಆದೇಶ ಹೊರಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !