ಮಲೆನಾಡಿನಲ್ಲಿ ಸಾಮಾನ್ಯವಾಗಿ ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಕಂಡುಬರುವ ಮಂಗನಕಾಯಿಲೆ ಹುಟ್ಟಿದ್ದು ಹೇಗೆ? ಇದರ ಲಕ್ಷಣಗಳೇನು? ಯಾರೆಲ್ಲ ಎಚ್ಚರಿಕೆಯಿಂದ ಇರಬೇಕು? ಇದರ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್‌ನ ಕನ್ಸಲ್ಟೆಂಟ್ ವೈದ್ಯರಾದ ಡಾ. ಬಸವಪ್ರಭು ಮಾಹಿತಿ ನೀಡಿದ್ದಾರೆ. ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ..
ಕೆಎಫ್‌ಡಿ ಎಂದರೇನು?
ಕೆಎಫ್‌ಡಿ ಎಂದರೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂಬರ್ಥ. ಇದಕ್ಕೆ ಮಂಗನ ಕಾಯಿಲೆ ಎಂದೂ ಹೇಳಲಾಗುತ್ತದೆ. ಇದೊಂದು ಹೆಮೊರ್‍ಹಾಗಿಕ್ ವಿಧದ ಜ್ವರವಾಗಿದ್ದು ಕ್ಯಾಸನೂರು ಫಾರೆಸ್ಟ್ ಡಿಸೀಸ್ ಫ್ಲಾವಿವಿರೈಡೆ(Flaviviridae). ಎಂಬ ಜಾತಿಯ ವೈರಸ್‌ನಿಂದ ಹರಡುವ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಹಲವು ವರ್ಷಗಳಿಂದ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಭಾಗದಲ್ಲಿ ಕಂಡುಬರುತ್ತಿದೆ. ಇದು ಮೊದಲ ಬಾರಿಗೆ ಶಿವಮೊಗ್ಗದ ಕ್ಯಾಸನೂರು ಅರಣ್ಯದಲ್ಲಿ ಪತ್ತೆಯಾಗಿದ್ದು, ಇದೇ ಕಾರಣಕ್ಕೆ ಈ ಕಾಯಿಲೆಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಹೇಳಲಾಗುತ್ತದೆ.
ಕೆಎಫ್‌ಡಿ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದೇ?
ಮಂಗನ ಕಾಯಿಲೆ ಎಂದು ಕರೆಯಲ್ಪಡುವ ಕೆಎಫ್‌ಡಿ, ಟಿಕ್ ಬೈಟ್ ( ಸೋಂಕಿತ ಉಣ್ಣೆಗಳು) ಕಡಿತದಿಂದ ಹರಡುತ್ತದೆ ಮತ್ತು ಮಂಗಗಳು ಪ್ರಮುಖ ರೋಗ ವಾಹಕಗಳಾಗಿ ಕೆಲಸ ಮಾಡುತ್ತವೆ. ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡಲು ಸಾಧ್ಯವಿಲ್ಲ. ಸತ್ತ ಮಂಗಗಳು, ಸೋಂಕಿತ ಹುಳಗಳ ಕಡಿತದಿಂದ ಮನುಷ್ಯರಿಗೆ ಈ ರೋಗ ಹರಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾನ್ಯ ರೋಗ ಲಕ್ಷಣಗಳೇನು?
ರೋಗ ಲಕ್ಷಣಗಳು 2 ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲ ಹಂತದಲ್ಲಿ ಅತಿಯಾದ ಜ್ವರ, ತಲೆಯ ಮುಂಭಾಗದಲ್ಲಿ ನೋವು ಕೆಲವೊಮ್ಮೆ ರಕ್ತಸ್ರಾವ , ಸಂದು ನೋವು, ಕಣ್ಣು ನೋವು, ಕೆಲವೊಮ್ಮೆ ಅತಿಸಾರ, ವಾಂತಿ ಕೂಡ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಸಾಮಾನ್ಯವಾಗಿ ಡೆಂಗ್ಯೂ ರೋಗದಲ್ಲೂ ಕಂಡುಬರುತ್ತದೆ. ಡಿಸೆಂಬರ್‍ನಿಂದ ಮೇ ತಿಂಗಳ ಸಮಯದಲ್ಲಿ ಈ ರೋಗ ಪತ್ತೆಯಾಗುವುದು ಅಧಿಕವಾಗಿರುತ್ತದೆ. ಕಾಡುಗಳಲ್ಲಿ ಮಂಗಗಳು ಸಾವನ್ನಪ್ಪುವುದು ರೋಗ ಪತ್ತೆಯನ್ನು ಸೂಚಿಸುತ್ತದೆ.
ಎರಡನೇ ಹಂತದಲ್ಲಿ ಮೊದಲ ಹಂತದ ಲಕ್ಷಣಗಳ ಬಳಿಕ ಸಾಮಾನ್ಯ 2 ವಾರದಲ್ಲಿ ರೋಗಿಯಲ್ಲಿ ಗೊಂದಲ, ಅಪಸ್ಮಾರ ದ ಸಮಸ್ಯೆಗಳು ಹಾಗೇ ಮೆದುಳಿನ ಉರಿಯೂತ ಕೂಡ ಕಂಡುಬರುತ್ತದೆ. ಇವು ಶೇ. 10-20 ರಷ್ಟು ರೋಗಿಗಳಲ್ಲಿ ಪತ್ತೆಯಾಗುತ್ತದೆ ಹಾಗೇ ಸಾವಿಗೂ ಕಾರಣವಾಗುತ್ತೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಯಾರೆಲ್ಲ ಎಚ್ಚರಿಕೆಯಿಂದರಬೇಕು?
ರೈತರು, ಕಾಡಿನ ಸುತ್ತಮುತ್ತ ನೆಲೆಸಿರುವವರು , ಕಾಡುಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಿಸಲು ಹೋಗುವವರು, ಬೇಟೆಗೆ ಹೋಗುವವರು ಅಥವಾ ಕಾಡಿನಲ್ಲಿ ಕೆಲಸ ಮಾಡುವವರು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಇಂತವರು ಉಣ್ಣೆಗಳ ನಿವಾರಕ ಕ್ರೀಮ್‌ಗಳ ಬಳಕೆ, ತುಂಬು ತೋಳಿನ ಧಿರಿಸು, ಬೂಟ್‌ಗಳನ್ನು ಧರಿಸುವುದು ಅಗತ್ಯ. ಮಂಗನ ಕಾಯಿಲೆ ಅಧಿಕವಾಗಿರುವ ಸಮಯದಲ್ಲಿ ಕಾಡುಗಳಿಗೆ ತೆರಳದೇ ಇರುವುದು ಉತ್ತಮ. ಆಗಾಗೆ ಯಾವುದೇ ಹುಳು(ಉಣ್ಣೆಯ) ಕಡಿತದ ಬಗ್ಗೆ ಪರೀಕ್ಷಿಸಿಕೊಳ್ಳಿ. ಸತ್ತ ಮಂಗವನ್ನು ಬರಿಗೈಯಲ್ಲಿ ಮುಟ್ಟುಬೇಡಿ. ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿ.
ಕೆಎಫ್‌ಡಿಯಿಂದ ರಕ್ಷಣೆ ಹೇಗೆ
ಮಂಗನ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಅಧಿಕವಾಗಿರುವವರು ಲಸಿಕೆ ತೆಗೆದುಕೊಳ್ಳುವ ಮೂಲಕ ರೋಗದಿಂದ ರಕ್ಷಣೆ ಪಡೆಯಬಹುದು. ಲೈವ್ ಅಟ್ಟೆನೊಟೆಡ್( live attenuated ) ಲಸಿಕೆ ಲಭ್ಯವಿದ್ದು ಒಂದು ತಿಂಗಳ ಅಂತರದಲ್ಲಿ 2 ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆ ಪಡೆದ 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಕೂಡ ನೀಡಲಾಗುತ್ತದೆ. ಪ್ರತಿ 5 ವರ್ಷಕ್ಕೊಮ್ಮೆ ಬೂಸ್ಟರ್ ಡೋಸ್ ಪಡೆಯಬಹುದು. ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ ಹಾಗೇ ಗುಣಪಡಿಸಲೂ ಸಾಧ್ಯವಿಲ್ಲ. ಸಾಕಷ್ಟು ಪ್ರಕರಣಗಳು ನಿಯಂತ್ರಿಸಬಹುದಾಗಿದ್ದು ಸಾವಿನ ಪ್ರಮಾಣ ಶೇ. 3-10 ರಷ್ಟಿದೆ. ಮೆದುಳಿನ ಉರಿಯೂತ( Encephalitis) ಮತ್ತು ಅಪಸ್ಮಾರ ಸಾವಿಗೆ ಸಾಮಾನ್ಯ ಕಾರಣಗಳಾಗಿವೆ.
ಯಾವಾಗ ಆಸ್ಪತ್ರೆಗೆ ದಾಖಲಾಗಬೇಕು?
ರೋಗಿಯಲ್ಲಿ ತೀರಾ ನಿಶ್ಶಕ್ತಿ, ರಕ್ತಸ್ರಾವ, ದುರ್ಬಲ ನಾಡಿ, ಗೊಂದಲ, ಅಪಸ್ಮಾರ , ಬದಲಾದ ಸಂವೇದಕ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ಫ್ಲ್ಯುಯಿಡ್ ಬೆಂಬಲದ ಜೊತೆಗೆ ಲಕ್ಷಣಗಳನ್ನು ನಿಯಂತ್ರಿಸಲಾಗುತ್ತದೆ. ಜೊತೆಗೆ ಅನೊಟ್ರೊಫಿಕ್ ಬೆಂಬಲ , ಅಗತ್ಯವಿದ್ದರೆ ಪ್ಲೆಟ್ಲೆಟ್ ವರ್ಗಾವಣೆ ಜೊತೆಗೆ ಸೂಕ್ತ ಔಷಧಗಳ ಚಿಕಿತ್ಸೆ ನೀಡಲಾಗುತ್ತದೆ.

